ಉಡುಪಿ:
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೈಜ ಹಾಗೂ ಅರ್ಹ ಮತದಾರರು ಎದುರಿಸುತ್ತಿರುವ ವಾಸ್ತವ್ಯ ದೃಢೀಕರಣ ಪತ್ರದ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರ ನಿಯೋಗವು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿತು.
ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ವಿವರಗಳಲ್ಲಿನ ವ್ಯತ್ಯಾಸ ಸೇರಿದಂತೆ ವಿವಿಧ ಕಾರಣಗಳಿಂದ ಹಲವರಿಗೆ ನೋಟಿಸ್ ಜಾರಿಯಾಗುತ್ತಿದೆ. ನೋಟಿಸ್‌ನಲ್ಲಿ ಸೂಚಿಸಲಾದ ದಾಖಲೆಗಳು ಕೆಲ ಮತದಾರರ ಬಳಿ ಲಭ್ಯವಿಲ್ಲದ ಕಾರಣ, ಚುನಾವಣಾ ಆಯೋಗ ಮಾನ್ಯ ಮಾಡುವ ವಾಸ್ತವ್ಯ ದೃಢೀಕರಣ ಪತ್ರ ಪಡೆಯಲು ಅವರು ಸ್ಥಳೀಯ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದಾರೆ.
ಆದರೆ, ವಿವಿಧ ಕಾರಣಗಳನ್ನು ನೀಡಿ ವಾಸ್ತವ್ಯ ದೃಢೀಕರಣ ಪತ್ರ ನೀಡುವಲ್ಲಿ ವಿಳಂಬವಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ಮುಖಂಡರು ಮನವಿಯಲ್ಲಿ ಮಾಡಿದ್ದಾರೆ.
ಕಚೇರಿಗಳಿಗೆ ಅಲೆದಾಡುತ್ತಿರುವ ಮತದಾರರು
ಬಾಡಿಗೆ ಮನೆಗಳಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವವರು, ಅಗತ್ಯ ದಾಖಲೆಗಳನ್ನು ಹೊಂದಿರದವರು ಹಾಗೂ ಹಳೆಯ ದಾಖಲೆಗಳಲ್ಲಿ ವಿಳಾಸದ ವ್ಯತ್ಯಾಸ ಇರುವವರು ವಾಸ್ತವ್ಯ ದೃಢೀಕರಣ ಪತ್ರಕ್ಕಾಗಿ ಪ್ರತಿನಿತ್ಯ ಕಂದಾಯ ಕಚೇರಿಗಳಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆತಂಕ ವ್ಯಕ್ತಪಡಿಸಿದರು.
ಈ ರೀತಿಯ ಆಡಳಿತಾತ್ಮಕ ವಿಳಂಬದಿಂದ ಯಾವುದೇ ಅರ್ಹ ನಾಗರಿಕರು ತಮ್ಮ ಸಾಂವಿಧಾನಿಕ ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಮತದಾರರ ಹಕ್ಕಿನ ರಕ್ಷಣೆಗೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡುವಂತೆ ಆಗ್ರಹ
SIR ಪ್ರಕ್ರಿಯೆಗೆ ಸಂಬಂಧಿಸಿದಂತೆ ಅರ್ಹ ಮತದಾರರು ವಾಸ್ತವ್ಯ ದೃಢೀಕರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಕೂಡಲೇ, ನಿಯಮಾನುಸಾರ ಅಗತ್ಯ ಪರಿಶೀಲನೆ ನಡೆಸಿ ಪತ್ರವನ್ನು ಶೀಘ್ರವಾಗಿ ನೀಡುವಂತೆ ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರನ್ನು ಮನವಿ ಮೂಲಕ ಒತ್ತಾಯಿಸಲಾಯಿತು.
ಪ್ರಜಾಪ್ರಭುತ್ವದ ಮೂಲಾಧಾರವಾದ ಮತದಾನದ ಹಕ್ಕಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಹಾಬಲ ಕುಂದರ್, ಕೃಷ್ಣ ಹೆಬ್ಬಾರ್, ಹರಿಪ್ರಸಾದ್ ರೈ, ಗಣೇಶ್ ನೆರ್ಗಿ, ಸತೀಶ್ ಕೊಡವೂರು, ಸುಕೇಶ್ ಕುಂದರ್, ಸತೀಶ್ ಕುಮಾರ್ ಮಂಚಿ, ಶಶಿರಾಜ್ ಕುಂದರ್, ಲಕ್ಷ್ಮಣ್ ಪೂಜಾರಿ, ಮಮತಾ ಶೆಟ್ಟಿ, ಆಶಾ ಚಂದ್ರಶೇಖರ್, ಸಂಧ್ಯಾ ತಿಲಕ್‌ರಾಜ್, ಸದಾನಂದ್ ಕುಲಾಲ್, ಆರೀಫ್, ಬೋನಿಫಾಸ್, ಭರತ್ ಕುಮಾರ್, ಶಕುಂತಲಾ, ದಯಾನಂದ್ ಹಾಗೂ ಸಂಜಯ್ ಆಚಾರ್ಯ ಉಪಸ್ಥಿತರಿದ್ದರು.


