ಉಡುಪಿ:
ಯಾವುದೇ ಅಧಿಕೃತ ಪರವಾನಗಿ ಅಥವಾ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯದೆ ಸರ್ಕಾರಿ ಜಮೀನಿನಲ್ಲಿ ಸ್ಫೋಟಕ ವಸ್ತು ಬಳಸಿ ಬಂಡೆಕಲ್ಲು ಸ್ಫೋಟಿಸಿದ ಆರೋಪದ ಮೇಲೆ ಇಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ತಾಲ್ಲೂಕಿನ ಮರ್ಣೆ ಗ್ರಾಮದ ಕುಕ್ಕುಪಲ್ಕೆ ಸರ್ಕಾರಿ ಜಮೀನಿನಲ್ಲಿ ಸೆಪ್ಟೆಂಬರ್ 5ರಂದು ಬೆಳಿಗ್ಗೆ ಸುಮಾರು 11 ಗಂಟೆ ವೇಳೆಗೆ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಸ್ಫೋಟಕ ವಸ್ತುಗಳನ್ನು ಬಳಸಿ ಜಮೀನಿನಲ್ಲಿದ್ದ ಬಂಡೆಕಲ್ಲನ್ನು ಸ್ಫೋಟಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾಹಿತಿ ಪಡೆದ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ಇಬ್ಬರು ಆರೋಪಿಗಳ ಬಂಧನ
ಪ್ರಕರಣದ ತನಿಖೆಯನ್ನು ಮಣಿಪಾಲ ಪೊಲೀಸ್ ಠಾಣೆಯ ಪಿಎಸ್‌ಐ ತಿಮ್ಮೇಶ್ ಬಿ.ಎನ್. ಕೈಗೊಂಡು, ಕಾರ್ಕಳ ತಾಲ್ಲೂಕಿನ ಇನ್ನಾ ಗ್ರಾಮದ ಕೆ. ಗೋವಿಂದರಾಜ್ (40) ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಶೇಖಪ್ಪ ಚಲವಾದಿ ಅಲಿಯಾಸ್ ಚಂದ್ರು (28) ಅವರನ್ನು ಬಂಧಿಸಿದ್ದಾರೆ.
ಟ್ರ್ಯಾಕ್ಟರ್, ಕಾರು ಪೊಲೀಸರ ವಶಕ್ಕೆ
ತನಿಖೆ ವೇಳೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ KA-28-TA-6421 ನೋಂದಣಿ ಸಂಖ್ಯೆಯ ಡ್ರಿಲ್ಲಿಂಗ್ ಕಂಪ್ರೆಸರ್ ಅಳವಡಿಸಿದ ಮಹೀಂದ್ರಾ ಟ್ರ್ಯಾಕ್ಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದರ ಜೊತೆಗೆ KA-19-ME-7707 ನೋಂದಣಿ ಸಂಖ್ಯೆಯ ಗ್ರೇ ಬಣ್ಣದ ನಿಶಾನ್ ಟೆರಾನೊ ಕಾರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.


