Public Prime News

CLEAR VISION, TRUE MISSION

ಉಡುಪಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣದ ಸ್ಥಳ ಶುದ್ಧೀಕರಣ ವಿವಾದ; ಸೆ.12 ರಂದು ಕಾಂಗ್ರೆಸ್‌ನಿಂದ ಬೃಹತ್ ಸತ್ಯಾಗ್ರಹ..!
politics

ಉಡುಪಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣದ ಸ್ಥಳ ಶುದ್ಧೀಕರಣ ವಿವಾದ; ಸೆ.12 ರಂದು ಕಾಂಗ್ರೆಸ್‌ನಿಂದ ಬೃಹತ್ ಸತ್ಯಾಗ್ರಹ..!

Public Prime News

Public Prime News

Reported by Public Prime News

ಉಡುಪಿ: 

ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ಸ್ಥಳವನ್ನು ಬಿಜೆಪಿ ಕಾರ್ಯಕರ್ತರು ಸ್ವಚ್ಛಗೊಳಿಸಿ ‘ಶುದ್ಧೀಕರಿಸಿದ’ ಘಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದು ಹಿರಿಯ ರಾಷ್ಟ್ರೀಯ ನಾಯಕನಿಗೆಸ್ದ ಅಪಮಾನ ಎಂದು ಆರೋಪಿಸಿರುವ ಕಾಂಗ್ರೆಸ್, ಸೆಪ್ಟೆಂಬರ್ 12 ರಂದು ಉಡುಪಿಯಲ್ಲಿ ಬೃಹತ್ ಸತ್ಯಾಗ್ರಹ ಹಮ್ಮಿಕೊಂಡಿದೆ.


ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಈ ಮಾಹಿತಿ ನೀಡಿದ್ದು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.


ಸೆ.12 ರಂದು ಅಜ್ಜರಕಾಡಿನಲ್ಲಿ ಮೌನ ಪ್ರತಿಭಟನೆ: 

ಮಾತನಾಡಿದ ಹರೀಶ್ ಕಿಣಿ, "ಸೆಪ್ಟೆಂಬರ್ 12 ರಂದು ಬೆಳಿಗ್ಗೆ 10:30 ಗಂಟೆಗೆ ಅಜ್ಜರಕಾಡಿನ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೇವಲ ಉಡುಪಿಯಲ್ಲಿ ಮಾತ್ರವಲ್ಲದೆ, ರಾಜ್ಯದ ಒಟ್ಟು 41 ಪ್ರಮುಖ ಸ್ಥಳಗಳಲ್ಲಿ ಏಕಕಾಲದಲ್ಲಿ ಈ ಪ್ರತಿಭಟನೆ ನಡೆಯಲಿದೆ" ಎಂದು ತಿಳಿಸಿದರು.


ಬಿಜೆಪಿಯವರ ಈ ಕೃತ್ಯವು ಅವರ ‘ಮನುವಾದಿ ಮನಸ್ಥಿತಿ’ಯನ್ನು ಬಟಾಬಯಲು ಮಾಡಿದೆ ಎಂದು ಕಿಡಿಕಾರಿದ ಅವರು, "ಇತರರ ಬಗ್ಗೆ ಕೀಳುಮಟ್ಟದ ರಾಜಕಾರಣ ಮಾಡುವ ಮುನ್ನ ಬಿಜೆಪಿ ಕಾರ್ಯಕರ್ತರು ತಮ್ಮ ಮನಸ್ಸಿನಲ್ಲಿರುವ ಮನುವಾದಿ ಕೊಳಕನ್ನು ಮೊದಲು ಸ್ವಚ್ಛಗೊಳಿಸಿಕೊಳ್ಳಲಿ" ಎಂದು ಸವಾಲು ಹಾಕಿದರು.


18 ನೇ ಶತಮಾನಕ್ಕೆ ಕೊಂಡೊಯ್ಯುವ ಹುನ್ನಾರ - ವಿನಯಕುಮಾರ್ ಸೊರಕೆ: 

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಮಾತನಾಡಿ, "ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಂತಹ ದಲಿತ ಸಮುದಾಯದ ಹಿರಿಯ ನಾಯಕನ ಭಾಷಣದ ಸ್ಥಳವನ್ನು ಶುದ್ಧೀಕರಿಸುವ ಮೂಲಕ ಬಿಜೆಪಿಯವರು ದೇಶವನ್ನು ಮತ್ತೆ 18 ನೇ ಶತಮಾನದ ಅಂಧಕಾರಕ್ಕೆ ಕೊಂಡೊಯ್ಯಲು ಯತ್ನಿಸುತ್ತಿದ್ದಾರೆ" ಎಂದು ಗಂಭೀರ ಆರೋಪ ಮಾಡಿದರು.


"ಇದು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅಪಮಾನವಲ್ಲ; ಬದಲಿಗೆ ದೇಶದ 140 ಕೋಟಿ ಜನರಿಗೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ. ಸಮಾಜದಲ್ಲಿ ಅಸ್ಪೃಶ್ಯತೆ ಮತ್ತು ಅಸಮಾನತೆಯನ್ನು ಮರುಸ್ಥಾಪಿಸುವ ಈ ಹುನ್ನಾರವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


ಈ ಕೃತ್ಯದ ವಿರುದ್ಧ ಈಗಾಗಲೇ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಅದರ ಮುಂದುವರಿದ ಭಾಗವಾಗಿ ಸೆಪ್ಟೆಂಬರ್ 12 ರಂದು ರಾಜ್ಯಾದ್ಯಂತ ಮೌನ ಮೆರವಣಿಗೆ ಹಾಗೂ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ವಿನಯಕುಮಾರ್ ಸೊರಕೆ ಸ್ಪಷ್ಟಪಡಿಸಿದರು.


ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲ್, ಪ್ರಚಾರ ಸಮಿತಿ ಪ್ರಮುಖರಾದ ಡಾ. ಸುಬ್ರಹ್ಮಣ್ಯ ಭಟ್, ಪ್ರಶಾಂತ್ ಪೂಜಾರಿ, ರಾಜೇಶ್ ಶೆಟ್ಟಿ, ದಿನಕರ್ ಶೆಟ್ಟಿ, ದಯಾನಂದ, ಚಂದ್ರಿಕಾ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Share this story