ನವದೆಹಲಿ:
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಹತ್ವದ ಕ್ರಮಕ್ಕೆ ಮುಂದಾಗಿರುವ ಸುಪ್ರೀಂ ಕೋರ್ಟ್, ಸಕ್ಕರೆ, ಉಪ್ಪು ಹಾಗೂ ಕೊಬ್ಬಿನಾಂಶ ಅಧಿಕವಾಗಿರುವ ಆಹಾರ ಪದಾರ್ಥಗಳ ಪ್ಯಾಕೆಟ್‌ಗಳ ಮೇಲೆ ಸ್ಪಷ್ಟ ಎಚ್ಚರಿಕೆಯ ಲೇಬಲ್ ಕಡ್ಡಾಯಗೊಳಿಸುವ ಕುರಿತು ಶೀಘ್ರದಲ್ಲೇ ವಿಸ್ತೃತ ಆದೇಶ ಹೊರಡಿಸುವುದಾಗಿ ತಿಳಿಸಿದೆ.
ದೇಶದಲ್ಲಿ ಪ್ಯಾಕೆಟ್ ಆಹಾರಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವುಗಳಲ್ಲಿರುವ ಅಧಿಕ ಪ್ರಮಾಣದ ಸಕ್ಕರೆ, ಉಪ್ಪು ಮತ್ತು ಕೊಬ್ಬಿನಾಂಶವು ಸಾರ್ವಜನಿಕರ ಆರೋಗ್ಯದ ಮೇಲೆ, ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿದೆ.
ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ವಿಭಾಗೀಯ ಪೀಠ, ಸಾರ್ವಜನಿಕರಿಗೆ ಆಹಾರ ಪದಾರ್ಥಗಳಲ್ಲಿರುವ ಆರೋಗ್ಯಕ್ಕೆ ಹಾನಿಕಾರಕ ಅಂಶಗಳ ಕುರಿತು ಸುಲಭವಾಗಿ ಮಾಹಿತಿ ದೊರೆಯುವಂತಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.
ಪ್ರಸ್ತುತ ಅನೇಕ ಪ್ಯಾಕೆಟ್ ಆಹಾರಗಳಲ್ಲಿನ ಪೌಷ್ಟಿಕಾಂಶದ ವಿವರಗಳು ಪೊಟ್ಟಣದ ಹಿಂಭಾಗದಲ್ಲಿ ಸಣ್ಣ ಅಕ್ಷರಗಳಲ್ಲಿ ನಮೂದಾಗಿರುತ್ತವೆ. ಆದರೆ ಸಾಮಾನ್ಯ ಗ್ರಾಹಕರು ಅದನ್ನು ಗಮನಿಸಿ ಅರ್ಥಮಾಡಿಕೊಳ್ಳುವುದು ಎಷ್ಟು ಸುಲಭ ಎಂಬ ಪ್ರಶ್ನೆಯನ್ನೂ ನ್ಯಾಯಾಲಯ ಎತ್ತಿದೆ.
ಸಕ್ಕರೆ, ಉಪ್ಪು ಮತ್ತು ಕೊಬ್ಬಿನಾಂಶ ಅಧಿಕವಾಗಿರುವ ಆಹಾರಗಳನ್ನು ಗ್ರಾಹಕರು ಸುಲಭವಾಗಿ ಗುರುತಿಸಲು ಯಾವುದಾದರೂ ಸ್ಪಷ್ಟ ಮತ್ತು ಪರಿಣಾಮಕಾರಿ ವ್ಯವಸ್ಥೆ ಇದೆಯೇ? ಎಂದು ಸುಪ್ರೀಂ ಕೋರ್ಟ್ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರಕ್ಕೆ (FSSAI) ಪ್ರಶ್ನಿಸಿದೆ.
ಆಹಾರ ಪದಾರ್ಥಗಳ ಪ್ಯಾಕೆಟ್‌ನ ಮುಂಭಾಗದಲ್ಲೇ ಸ್ಪಷ್ಟ ಎಚ್ಚರಿಕೆ ಅಥವಾ ವಿಶೇಷ ಗುರುತು ನೀಡುವ ವ್ಯವಸ್ಥೆ ಜಾರಿಗೆ ಬರಬಹುದೇ ಎಂಬ ಕುರಿತು ಇದೀಗ ಹೆಚ್ಚಿನ ಗಮನ ಹರಿಯುತ್ತಿದೆ.
ಸಾರ್ವಜನಿಕರು ಖರೀದಿಸುವ ಆಹಾರ ಪದಾರ್ಥಗಳ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳುವಂತಾಗುವುದು ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆಹಾರಗಳ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.
ಸುಪ್ರೀಂ ಕೋರ್ಟ್‌ನ ಮುಂದಿನ ವಿಸ್ತೃತ ಆದೇಶವು ದೇಶದ ಆಹಾರ ಉತ್ಪನ್ನಗಳ ಲೇಬಲಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುವ ಸಾಧ್ಯತೆ ಇದೆ.


