ಬೆಂಗಳೂರು:
ರಾಷ್ಟ್ರಗೀತೆ ಹಾಗೂ ದೇಶಭಕ್ತಿ ಗೀತೆಗಳ ಗಾಯನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ರಾಜ್ಯ ಸರ್ಕಾರದ ಬಹುತೇಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಸ್ಪಷ್ಟ ಮಾರ್ಗಸೂಚಿ ಹೊರಡಿಸಿದೆ.
ಗಾಯನ ಮತ್ತು ವಾದನದ ಸಂದರ್ಭದಲ್ಲಿ ಏಕರೂಪತೆ ಹಾಗೂ ಶಿಷ್ಟಾಚಾರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಸಚಿವ ಸಂಪುಟದ ನಿರ್ಧಾರದ ಹಿನ್ನೆಲೆಯಲ್ಲಿ ಈ ಆದೇಶವನ್ನು ಜಾರಿಗೊಳಿಸಲಾಗಿದೆ ಎಂದು ಸರಕಾರ ತಿಳಿಸಿದೆ.
ರಾಜ್ಯ ಸರ್ಕಾರದ ಈ ಹೊಸ ಆದೇಶವು ಸಾಮಾನ್ಯ ಸರ್ಕಾರಿ ಕಾರ್ಯಕ್ರಮಗಳಿಗೆ ಅನ್ವಯವಾಗಲಿದ್ದು, ಕೆಲವು ಗಣ್ಯರ ಕಾರ್ಯಕ್ರಮಗಳಿಗೆ ವಿನಾಯಿತಿ ನೀಡಲಾಗಿದೆ. ಅದರಂತೆ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ರಾಜ್ಯಪಾಲರು ಭಾಗವಹಿಸುವ ಅಧಿಕೃತ ಕಾರ್ಯಕ್ರಮಗಳಿಗೆ ಈ ಆದೇಶದಿಂದ ವಿನಾಯಿತಿ ಕಲ್ಪಿಸಲಾಗಿದೆ.
ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ‘ವಂದೇ ಮಾತರಂ’ ಗೀತೆಯು ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಭಾವನೆಯನ್ನು ಮೂಡಿಸುವಲ್ಲಿ ಸದಾ ಮುಂಚೂನಿಯಲ್ಲಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಂಡು, ರಾಜ್ಯದ ಕಾರ್ಯಕ್ರಮಗಳ ಸ್ವರೂಪ ಹಾಗೂ ಸಮಾರಂಭಗಳ ಘನತೆಗೆ ತಕ್ಕಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಇತ್ತೀಚಿನ ದಿನಗಳಲ್ಲಿ ‘ವಂದೇ ಮಾತರಂ’ ಗೀತೆಯ ಸಂಪೂರ್ಣ ಆವೃತ್ತಿ ಅಥವಾ ಮೊದಲ ಎರಡು ಚರಣಗಳ ಗಾಯನದ ಕುರಿತು ರಾಷ್ಟ್ರಮಟ್ಟದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಕರ್ನಾಟಕ ಸರ್ಕಾರ ನೀಡಿರುವ ಈ ಅಧಿಕೃತ ಸ್ಪಷ್ಟನೆ ರಾಜ್ಯ ರಾಜಕೀಯ ವಲಯದಲ್ಲೂ ಭಾರಿ ಸಂಚಲನ ಮೂಡಿಸುವ ಹಾಗೂ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಗಳಿವೆ.


