ನವದೆಹಲಿ:
ದೇಶದ ಗೃಹಬಳಕೆಯ ಎಲ್‌ಪಿಜಿ (LPG) ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಸಡಿಲಿಕೆ ಘೋಷಿಸಿದೆ. ಇನ್ಮುಂದೆ ಗ್ರಾಹಕರು ಪ್ರತಿ 25 ದಿನಗಳಿಗೊಮ್ಮೆ ಎಲ್‌ಪಿಜಿ ಸಿಲಿಂಡರ್ ರಿಫಿಲ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಈ ಪರಿಷ್ಕೃತ ನಿಯಮವು ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲಾ ಗೃಹಬಳಕೆದಾರರಿಗೂ ತಕ್ಷಣದಿಂದಲೇ ಅನ್ವಯವಾಗಲಿದೆ ಎಂದು ಪೆಟ್ರೋಲಿಯಂ, ನೈಸರ್ಗಿಕ ಅನಿಲ ಹಾಗೂ ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಗ್ರಾಹಕರಿಗೆ ದೊಡ್ಡ ರಿಲೀಫ್
ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಎರಡು ಸಿಲಿಂಡರ್ ರಿಫಿಲ್ ಬುಕ್ಕಿಂಗ್ ನಡುವಿನ ಅವಧಿಯನ್ನು 45 ದಿನಗಳಿಗೆ ನಿಗದಿಪಡಿಸಲಾಗಿತ್ತು. ಇದೀಗ ಈ ಅವಧಿಯನ್ನು 25 ದಿನಗಳಿಗೆ ಇಳಿಸಲಾಗಿದ್ದು, ಗ್ರಾಮೀಣ ಕುಟುಂಬಗಳಿಗೆ ಸರ್ಕಾರದ ಈ ನಿರ್ಧಾರದಿಂದ ದೊಡ್ಡ ಮಟ್ಟದ ಅನುಕೂಲವಾಗಲಿದೆ.
ನಿರ್ಬಂಧ ಸಡಿಲಿಕೆಗೆ ಕಾರಣವೇನು.?
ಪೂರೈಕೆ ಕೊರತೆ ತಗ್ಗಿರುವುದು:
ಮಧ್ಯಪ್ರಾಚ್ಯದಲ್ಲಿ ಉಂಟಾಗಿದ್ದ ಯುದ್ಧದಂತಹ ಸಂಘರ್ಷದ ಸ್ಥಿತಿಯಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಬುಕ್ಕಿಂಗ್ ನಡುವಿನ ದಿನಗಳ ಅವಧಿಯನ್ನು ಹೆಚ್ಚಿಸಲಾಗಿತ್ತು.
ಪರಿಸ್ಥಿತಿ ಸುಧಾರಣೆ:
ಪ್ರಸ್ತುತ ದೇಶದಲ್ಲಿ ಎಲ್‌ಪಿಜಿ ಪೂರೈಕೆ ಸ್ಥಿತಿಗತಿ ಯಥಾಸ್ಥಿತಿಗೆ ಬಂದಿದ್ದು, ಬಾಕಿ ಉಳಿದಿದ್ದ ಸಿಲಿಂಡರ್ ಬೇಡಿಕೆಯ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಮುಂಚಿನ ನಿರ್ಬಂಧವನ್ನು ಹಿಂಪಡೆದಿದೆ.
ತೈಲ ಕಂಪನಿಗಳಿಗೆ ತಕ್ಷಣದ ಸೂಚನೆ
ಹೊಸ ನಿಯಮದಂತೆ ನಗರ ಹಾಗೂ ಗ್ರಾಮೀಣ ಎಂಬ ಭೇದಭಾವವಿಲ್ಲದೆ ಎಲ್ಲ ಗ್ರಾಹಕರು 25 ದಿನಗಳ ಅಂತರದಲ್ಲಿ ರಿಫಿಲ್ ಬುಕ್ ಮಾಡಬಹುದು. ಈ ಬದಲಾವಣೆಯನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ಪೆಟ್ರೋಲಿಯಂ ಸಚಿವಾಲಯವು ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ಅಧಿಕೃತ ನಿರ್ದೇಶನ ನೀಡಿದೆ.
ಈ ಕುರಿತು ಸಚಿವಾಲಯವು ತೈಲ ಕಂಪನಿಗಳಿಗೆ ಬರೆದಿರುವ ಅಧಿಕೃತ ಪತ್ರದ ಪ್ರತಿಯನ್ನೂ ಸಚಿವ ಸುರೇಶ್ ಗೋಪಿ ಅವರು ಹಂಚಿಕೊಂಡಿದ್ದಾರೆ. ಸರ್ಕಾರದ ಈ ಕ್ರಮದಿಂದಾಗಿ ಸಿಲಿಂಡರ್ ವಿತರಣೆಯಲ್ಲಾಗುತ್ತಿದ್ದ ವಿಳಂಬ ತಪ್ಪಲಿದ್ದು, ನಿತ್ಯ ಎಲ್‌ಪಿಜಿ ಬಳಸುವ ಕುಟುಂಬಗಳಿಗೆ ನಿರಾಳತೆ ತಂದಿದೆ.


