Public Prime News

CLEAR VISION, TRUE MISSION

ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಹಾವಳಿಗೆ ಬ್ರೇಕ್: ಸರಕಾರಕ್ಕೆ ಖಾಸಗಿ ಶಾಲೆಗಳ ಒಕ್ಕೂಟದ ಖಡಕ್ ಮನವಿ
education

ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಹಾವಳಿಗೆ ಬ್ರೇಕ್: ಸರಕಾರಕ್ಕೆ ಖಾಸಗಿ ಶಾಲೆಗಳ ಒಕ್ಕೂಟದ ಖಡಕ್ ಮನವಿ

Public Prime News

Public Prime News

Reported by Public Prime News

ಬೆಂಗಳೂರು: 

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಯಾವುದೇ ಅಧಿಕೃತ ನೋಂದಣಿ ಅಥವಾ ಸರ್ಕಾರದ ಅನುಮತಿಯಿಲ್ಲದೆ ಅಣಬೆಗಳಂತೆ ತಲೆಎತ್ತಿರುವ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 


ಟ್ಯುಟೋರಿಯಲ್ಸ್, ಅಕಾಡೆಮಿ ಹಾಗೂ ಸ್ಟಡಿ ಸೆಂಟರ್‌ಗಳ ಹೆಸರಿನಲ್ಲಿ ನಡೆಯುತ್ತಿರುವ ಈ ಸಂಸ್ಥೆಗಳ ಹಾವಳಿಗೆ ಕಡಿವಾಣ ಹಾಕಿ, ಕಡ್ಡಾಯವಾಗಿ ನಿಯಂತ್ರಣಕ್ಕೆ ತರಬೇಕೆಂದು ಒತ್ತಾಯಿಸಿ ಒಕ್ಕೂಟವು ಸರಕಾರದ ಶಿಕ್ಷಣ ಸುಧಾರಣಾ ಉಪಸಮಿತಿಗೆ ಅಧಿಕೃತವಾಗಿ ಮನವಿ ಸಲ್ಲಿಸಿದೆ.


ಶಾಲಾ ಅವಧಿಯಲ್ಲೇ ಕೋಚಿಂಗ್: ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು

1ರಿಂದ 12ನೇ ತರಗತಿಯ ಶಾಲಾ ವಿದ್ಯಾರ್ಥಿಗಳು ಹಾಗೂ ಸಿಇಟಿ (CET), ನೀಟ್ (NEET), ಜೆಇಇ (JEE) ಮುಂತಾದ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಂದ ಬೃಹತ್ ಪ್ರಮಾಣದಲ್ಲಿ ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿ ಮಾಡಲಾಗುತ್ತಿದೆ.


  • ಬೆಳಿಗ್ಗೆ 8ರಿಂದ ಮಧ್ಯಾಹ್ನ 3 ಗಂಟೆಯವರೆಗಿನ ನಿಯಮಿತ ಶಾಲಾ ಅವಧಿಯಲ್ಲೇ ಈ ಕೋಚಿಂಗ್ ತರಗತಿಗಳನ್ನು ನಡೆಸುವುದು ವಿದ್ಯಾರ್ಥಿಗಳ ಸರ್ವತೋಮುಖ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಮಾರಕವಾಗಲಿದೆ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.


  • ಕೋಚಿಂಗ್ ತರಬೇತಿಯನ್ನು ಕೇವಲ ಸಂಜೆ ವೇಳೆ ಅಥವಾ ರಜಾ ದಿನಗಳಲ್ಲಿ ಮಾತ್ರ ನಡೆಸಲು ಕಟ್ಟುನಿಟ್ಟಿನ ಅವಕಾಶ ಕಲ್ಪಿಸಬೇಕು ಎಂದು ಒಕ್ಕೂಟ ಪ್ರಮುಖವಾಗಿ ಪ್ರತಿಪಾದಿಸಿದೆ.


ಕಡ್ಡಾಯ ನೋಂದಣಿ ಹಾಗೂ ಪಾರದರ್ಶಕತೆಗೆ ಪ್ರಮುಖ ಬೇಡಿಕೆಗಳು

ಖಾಸಗಿ ಶಾಲೆಗಳ ಒಕ್ಕೂಟವು ಕೋಚಿಂಗ್ ಸೆಂಟರ್‌ಗಳ ಹಾವಳಿಗೆ ಕಡಿವಾಣ ಹಾಕಲು ಹಲವು ಕಠಿಣ ಬೇಡಿಕೆಗಳನ್ನು ಮುಂದಿಟ್ಟಿದೆ:


  • ಕಡ್ಡಾಯ ನೋಂದಣಿ: 

  • ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್ 2(39) ಮತ್ತು 35ರ ಪ್ರಕಾರ ರಾಜ್ಯದ ಎಲ್ಲಾ ಕೋಚಿಂಗ್ ಸಂಸ್ಥೆಗಳಿಗೆ ನಿಗದಿತ ಕಾಲಮಿತಿಯಲ್ಲಿ ನೋಂದಣಿ ಕಡ್ಡಾಯಗೊಳಿಸಬೇಕು. ನೋಂದಾಯಿತ ಸಂಸ್ಥೆಗಳ ವಿವರಗಳನ್ನು ಸಾರ್ವಜನಿಕ ಪೋರ್ಟಲ್‌ನಲ್ಲಿ ಪ್ರಕಟಿಸಬೇಕು.


  • ಸುರಕ್ಷತಾ ಕ್ರಮಗಳು: 

  • ಕೋಚಿಂಗ್ ಸೆಂಟರ್‌ಗಳ ಕಟ್ಟಡಗಳು ಕಡ್ಡಾಯವಾಗಿ ಅಗ್ನಿಶಾಮಕ ಮತ್ತು ಇತರೆ ಸುರಕ್ಷತಾ ಮಾನದಂಡಗಳನ್ನು ಹೊಂದಿರಬೇಕು ಹಾಗೂ ತರಗತಿಯೊಂದಕ್ಕೆ ಗರಿಷ್ಠ ವಿದ್ಯಾರ್ಥಿಗಳ ಮಿತಿ ನಿಗದಿಪಡಿಸಬೇಕು.


  • ಶುಲ್ಕ ಪಾರದರ್ಶಕತೆ: 

  • ಪಡೆಯುವ ಪ್ರತಿ ರೂಪಾಯಿಗೂ ಕಡ್ಡಾಯವಾಗಿ ರಸೀದಿ ನೀಡುವುದು ಹಾಗೂ ಕೋರ್ಸ್ ಮಧ್ಯೆ ನಿಲ್ಲಿಸುವವರಿಗೆ ಶುಲ್ಕ ಮರುಪಾವತಿಸಲು ಸ್ಪಷ್ಟ ನಿಯಮ ರೂಪಿಸಬೇಕು.


  • ಅರ್ಹತಾ ಶಿಕ್ಷಕರು: 

  • ಬೋಧನೆ ಮಾಡುವ ಶಿಕ್ಷಕರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ಇರುವುದನ್ನು ಖಚಿತಪಡಿಸಬೇಕು.


  • ಸುಳ್ಳು ಜಾಹೀರಾತುಗಳಿಗೆ ಕಡಿವಾಣ: 

  • 'ಶೇ 100 ಫಲಿತಾಂಶ' ಎಂಬಂತಹ ವಿದ್ಯಾರ್ಥಿ ಹಾಗೂ ಪೋಷಕರನ್ನು ದಾರಿತಪ್ಪಿಸುವ ಸುಳ್ಳು ಜಾಹೀರಾತುಗಳಿಗೆ ಸಂಪೂರ್ಣ ತಡೆ ಹಾಕಬೇಕು.


ಯು.ಟಿ. ಖಾದರ್ ಅವರಿಂದ ಪರಿಶೀಲನಾ ಭರವಸೆ

ಖಾಸಗಿ ಶಾಲೆಗಳಿಗೆ ಕಠಿಣ ನಿಯಮಗಳನ್ನು ವಿಧಿಸುವ ಸರಕಾರ, ಕೋಚಿಂಗ್ ಸೆಂಟರ್‌ಗಳ ಮೇಲೆ ಯಾವುದೇ ಸೂಕ್ತ ನಿಯಂತ್ರಣ ಹೊಂದಿಲ್ಲದಿರುವುದನ್ನು ಒಕ್ಕೂಟ ಎತ್ತಿ ತೋರಿಸಿದೆ. 


ಒಕ್ಕೂಟದ ಈ ಗಂಭೀರ ಮನವಿಗೆ ಸ್ಪಂದಿಸಿರುವ ಶಿಕ್ಷಣ ಸುಧಾರಣಾ ಉಪಸಮಿತಿ ಅಧ್ಯಕ್ಷ ಹಾಗೂ ಸಚಿವ ಯು.ಟಿ. ಖಾದರ್, ಕೋಚಿಂಗ್ ಸೆಂಟ್ರಲ್‌ಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಒಕ್ಕೂಟ ಸಲ್ಲಿಸಿರುವ ಎಲ್ಲಾ ಬೇಡಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

Share this story