ಬೆಂಗಳೂರು:
ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರ ಆರ್ಥಿಕ ಹೊರೆಯನ್ನು ತಗ್ಗಿಸಲು ಮತ್ತು ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರವು ಅತ್ಯಂತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸಚಿವ ಸಂಪುಟ ಸಭೆಯ ಬಳಿಕ ಸರ್ಕಾರದ ವತಿಯಿಂದ ರೈತಪರವಾದ ‘ಮುಖ್ಯಮಂತ್ರಿ ನೇಗಿಲ ಯೋಗಿ’ ವಿನೂತನ ಯೋಜನೆಗೆ ತೀರ್ಮಾನಿಸಲಾಗಿದೆ.
ಉಳುಮೆ ವೆಚ್ಚ ಭರಿಸಲಾಗದೆ ಪರದಾಡುವ ಬಡ ರೈತರ ಕಷ್ಟಕ್ಕೆ ಸ್ಪಂದಿಸಲು ಸರ್ಕಾರವೇ ಮುಂದೆ ಬಂದಿದ್ದು, ಉಚಿತವಾಗಿ ಹೊಲ ಉಳುಮೆ ಮಾಡಿಕೊಡುವ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ.
ಯೋಜನೆಯ ಪ್ರಮುಖ ಮುಖ್ಯಾಂಶಗಳು:
ಸಂಪೂರ್ಣ ಉಚಿತ ಉಳುಮೆ:
ಬಡ ಹಾಗೂ ಸಣ್ಣ ರೈತರಿಗೆ ಹೊಲ ಹೊಡೆಯುವ (ಉಳುಮೆ ಮಾಡುವ) ವೆಚ್ಚವೇ ದೊಡ್ಡ ಹೊರೆಯಾಗಿರುವುದರಿಂದ, ಸರ್ಕಾರವೇ ಸ್ವತಃ ಜಮೀನನ್ನು ಉಚಿತವಾಗಿ ಉಳುಮೆ ಮಾಡಿಕೊಡಲಿದೆ.
ಸಣ್ಣ ರೈತರಿಗೆ ಮೊದಲ ಆದ್ಯತೆ:
ಮೂರು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ತಳಮಟ್ಟದ ರೈತರಿಗೆ ಈ ಯೋಜನೆಯ ನೇರ ಹಾಗೂ ಸಂಪೂರ್ಣ ಲಾ ಸಿಗಲಿದೆ.
ಸರ್ಕಾರದಿಂದಲೇ ಟ್ಯಾಕ್ಟರ್ ಬಾಡಿಗೆ ಪಾವತಿ:
ರೈತರ ಜಮೀನು ಉಳುಮೆ ಮಾಡಲು ಬಳಸುವ ಟ್ಯಾಕ್ಟರ್‌ಗಳ ಬಾಡಿಗೆ ಮೊತ್ತವನ್ನು ಸರ್ಕಾರದ ಖಜಾನೆಯಿಂದಲೇ ನೇರವಾಗಿ ಪಾವತಿಸಲಾಗುತ್ತದೆ.
ಯಂತ್ರೋಪಕರಣಗಳ ಪೂರೈಕೆ:
ಸ್ಥಳೀಯವಾಗಿ ಟ್ಯಾಕ್ಟರ್‌ಗಳ ಕೊರತೆ ಕಂಡುಬಂದಲ್ಲಿ, ಪರ್ಯಾಯ ವ್ಯವಸ್ಥೆಯಾಗಿ ಸರ್ಕಾರವೇ ಟ್ರ್ಯಾಕ್ಟರ್ ಹಾಗೂ ಇತರೆ ಅಗತ್ಯ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲಿದೆ.
31 ತಾಲೂಕುಗಳಲ್ಲಿ ಪೈಲಟ್ ಪ್ರಾಜೆಕ್ಟ್:
ಮೊದಲ ಹಂತವಾಗಿ ರಾಜ್ಯದ ಆಯ್ದ 31 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ಬರಲಿದ್ದು, ಯಶಸ್ಸಿನ ಬಳಿಕ ರಾಜ್ಯಾದ್ಯಂತ ವಿಸ್ತರಿಸಲಾಗುವುದು.
ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಮತ್ತು ರೈತರ ಮೇಲಿನ ಉತ್ಪಾದನಾ ವೆಚ್ಚದ ಭಾರವನ್ನು ಕಡಿಮೆ ಮಾಡಲು ಈ ‘ನೇಗಿಲ ಯೋಗಿ’ ಯೋಜನೆ ಮಹತ್ವದ ಬಲ ತುಂಬಲಿದೆ.


