ಬೆಂಗಳೂರು:
ರಾಜ್ಯದಲ್ಲಿ ಒಂದನೇ ತರಗತಿ ದಾಖಲಾತಿಗೆ ಸಂಬಂಧಿಸಿದಂತೆ ವಯೋಮಿತಿ ಸಡಿಲಿಕೆ ಆದೇಶ ಅನುಷ್ಠಾನಗೊಳ್ಳುವುದು ವಿಳಂಬವಾಗುತ್ತಿದ್ದು, ಇದರಿಂದಾಗಿ ರಾಜ್ಯದ ಸುಮಾರು 5 ಲಕ್ಷಕ್ಕೂ ಹೆಚ್ಚು ಮಕ್ಕಳ ಶೈಕ್ಷಣಿಕ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಿದೆ. ಸರ್ಕಾರದ ಈ ವಿಳಂಬ ಧೋರಣೆಯಿಂದಾಗಿ ಪೋಷಕರಲ್ಲಿ ತೀವ್ರ ಆತಂಕ ಹಾಗೂ ಗೊಂದಲ ಮೂಡಿದೆ.
ಪೋಷಕರ ಆತಂಕಕ್ಕೆ ಕಾರಣವೇನು.?
ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನ್ವಯ ಒಂದನೇ ತರಗತಿ ದಾಖಲಾತಿಗೆ ಜೂನ್ 1ಕ್ಕೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿತ್ತು. ಆದರೆ, ಈ ಕಟ್ಟುನಿಟ್ಟಿನ ನಿಯಮದಿಂದಾಗಿ ಲಕ್ಷಾಂತರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಶಾಲೆಗೆ ದಾಖಲಾಗಲು ವಯಸ್ಸಿನ ಕೊರತೆ ಎದುರಿಸುವಂತಾಯಿತು. ಈ ಹಿನ್ನೆಲೆಯಲ್ಲಿ ಪೋಷಕರು ಮತ್ತು ಶಿಕ್ಷಣ ತಜ್ಞರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಸರ್ಕಾರವು ವಯೋಮಿತಿಯಲ್ಲಿ ಸಡಿಲಿಕೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದರೂ ಈವರೆಗೂ ಅಧಿಕೃತ ಆದೇಶ ಜಾರಿಯಾಗಿಲ್ಲ.
ಖಾಸಗಿ ಶಾಲೆಗಳ ದಾಖಲಾತಿ ಪ್ರಕ್ರಿಯೆ ಪೂರ್ಣ:
ಇನ್ನೊಂದೆಡೆ, ರಾಜ್ಯದ ಬಹುತೇಕ ಖಾಸಗಿ ಶಾಲೆಗಳು ಈಗಾಗಲೇ ತಮ್ಮ ದಾಖಲಾತಿ ಪ್ರಕ್ರಿಯೆಯನ್ನು ಬಹುಪಾಲು ಪೂರ್ಣಗೊಳಿಸಿವೆ. ಸರ್ಕಾರದಿಂದ ವಯೋಮಿತಿ ಸಡಿಲಿಕೆಯ ಸ್ಪಷ್ಟ ಆದೇಶ ಬಾರದ ಕಾರಣ, ನಿಯಮಾವಳಿಗಳ ಗೊಂದಲದಿಂದಾಗಿ ಶಾಲೆಗಳು ವಯಸ್ಸಿನ ಕೊರತೆ ಇರುವ ಮಕ್ಕಳನ್ನು ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲಾಗದೆ ಕಂಗಾಲಾಗಿದ್ದಾರೆ.
ಶಿಕ್ಷಣ ಇಲಾಖೆಯ ವಿಳಂಬ ನೀತಿಗೆ ಆಕ್ರೋಶ:
ಶಾಲಾ ಶೈಕ್ಷಣಿಕ ವರ್ಷ ಈಗಾಗಲೇ ಆರಂಭದ ಹಂತದಲ್ಲಿದ್ದರೂ, ಶಿಕ್ಷಣ ಇಲಾಖೆಯು ಇನ್ನು ಕಡತಗಳ ವಿಲೇವಾರಿಯಲ್ಲೇ ಕಾಲಹರಣ ಮಾಡುತ್ತಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ವಯೋಮಿತಿ ಸಡಿಲಿಕೆಯ ಅಧಿಕೃತ ಆದೇಶವನ್ನು ಹೊರಡಿಸದಿದ್ದರೆ, ಲಕ್ಷಾಂತರ ಮಕ್ಕಳ ಒಂದು ವರ್ಷದ ಶೈಕ್ಷಣಿಕ ಅವಧಿ ವ್ಯರ್ಥವಾಗುವ ಭೀತಿ ಎದುರಾಗಿದೆ.


