ಉಡುಪಿ:
ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಗೂಂಡಾ ಸಂಸ್ಕೃತಿ ಮತ್ತು ದೇಶವಿರೋಧಿ ನೀತಿಯನ್ನು ಕಾಂಗ್ರೆಸ್ ಹಾಗೂ ‘ಕಾಕ್ರೋಚ್’ ಬೆಂಬಲಿತರು ಅನುಸರಿಸುತ್ತಿದ್ದಾರೆ ಎಂದು ತೀವ್ರವಾಗಿ ಆಪಾದಿಸಿರುವ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜಟ್ಕಾ ಸ್ಟ್ಯಾಂಡ್ ಬಳಿ ಮಂಗಳವಾರ ಬೃಹತ್ ಉಗ್ರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಹಾಗೂ ವಿಪಕ್ಷಗಳ ವಿರುದ್ಧ ಮುಗಿಬಿದ್ದು ಘೋಷಣೆಗಳನ್ನು ಕೂಗಿದರು.
ಈ ವೇಳೆ ವಿಪಕ್ಷ ನಾಯಕರ ಸಾಂಕೇತಿಕ ‘ಜಿರಲೆ’ ಭಾವಚಿತ್ರಕ್ಕೆ ರಾಸಾಯನಿಕ ಸಿಂಪಡಿಸಿ, ಕಲ್ಲಿನಿಂದ ಜಜ್ಜುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು.
ರಾಹುಲ್ ಗಾಂಧಿ ಹಾಗೂ ಪ್ರಕಾಶ್ ರಾಜ್ ವಿರುದ್ಧ ಶಾಸಕ ಯಶ್‌ಪಾಲ್ ಸುವರ್ಣ ವಾಗ್ದಾಳಿ
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಯಶಪಾಲ್ ಎ. ಸುವರ್ಣ, ಕಾಂಗ್ರೆಸ್, ‘ಕಾಕ್ರೋಚ್’ ಹಾಗೂ ಎಸ್‌ಡಿಪಿಐ ಸೇರಿದಂತೆ ರಾಷ್ಟ್ರವಿರೋಧಿ ಶಕ್ತಿಗಳ ಬೆಂಬಲದಿಂದ ನಡೆಯುತ್ತಿರುವ ಪ್ರತಿಭಟನೆಗಳು ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಅಲ್ಲ, ಬದಲಾಗಿ ದೇಶದಲ್ಲಿ ಶಾಂತಿ ಕದಡುವ ದುರುದ್ದೇಶದಿಂದ ಕೂಡಿವೆ ಎಂದು ನೇರ ಆರೋಪ ಮಾಡಿದರು.
"ಸದಾ ನಶೆಯಲ್ಲಿ ತೇಲುತ್ತಿರುವ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ತಲೆಯಲ್ಲಿ ವಿಷಬೀಜ ಬಿತ್ತುವ ಮೂಲಕ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ಉದ್ದೇಶಪೂರ್ವಕವಾಗಿ ಉದ್ವಿಗ್ನತೆ ಸೃಷ್ಟಿಸುವ ರಾಜಕೀಯವನ್ನು ಕಾಂಗ್ರೆಸ್ ಮಾಡುತ್ತಿದೆ.
ಇದೇ ವೇಳೆ, ನಟ ಪ್ರಕಾಶ್ ರಾಜ್ ಅವರೇ ಉಡುಪಿಗೆ ಬಂದು ನಿಮ್ಮ ಅಧಿಕ ಪ್ರಸಂಗದ ಮಾತನ್ನು ಕೂಡಲೇ ನಿಲ್ಲಿಸಿ, ಇಲ್ಲದಿದ್ದರೆ ಕರಾವಳಿಯ ಮೀನುಗಳಿಗೆ ಆಹಾರವಾಗಬೇಕಾಗುತ್ತದೆ" ಎಂದು ಅವರು ಉಗ್ರವಾಗಿ ಎಚ್ಚರಿಸಿದರು.
ಮಣಿಪಾಲದ 7 ಫ್ಯಾಕಲ್ಟಿಗಳ ವಿರುದ್ಧ ಗಾಂಜಾ ಪೂರೈಕೆ ಗಂಭೀರ ಆರೋಪ
ಕೇವಲ ರಾಜಕೀಯ ಟೀಕೆಗಳಿಗೆ ಸೀಮಿತವಾಗದೆ, ಶಿಕ್ಷಣ ಕಾಶಿಯಾದ ಮಣಿಪಾಲದ ಕುರಿತು ಶಾಸಕ ಯಶ್‌ಪಾಲ್ ಸುವರ್ಣ ಅತ್ಯಂತ ಸ್ಫೋಟಕ ಹಾಗೂ ಗಂಭೀರ ಆರೋಪವೊಂದನ್ನು ಮುನ್ನೆಲೆಗೆ ತಂದಿದ್ದಾರೆ.
ಮಣಿಪಾಲದ ಪ್ರತಿಷ್ಠಿತ ಕಾಲೇಜಿನ ಏಳು ಮಂದಿ ಅಧ್ಯಾಪಕರು (ಫ್ಯಾಕಲ್ಟಿಗಳು) ವಿದ್ಯಾರ್ಥಿಗಳನ್ನು ರಾಜಕೀಯ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡಿ ಪ್ರಚೋದಿಸುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ಅದೇ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದಾರೆ ಎಂಬ ಗಂಭೀರ ಆಪಾದನೆ ಮಾಡಿದರು.
ಈ ಕುರಿತು ಪೊಲೀಸ್ ಇಲಾಖೆ ತಕ್ಷಣವೇ ಸಮಗ್ರ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಒಂದು ವೇಳೆ ತಪ್ಪಿತಸ್ಥ ಅಧ್ಯಾಪಕರ ವಿರುದ್ಧ ಯಾವುದೇ ಕ್ರಮ ಜರುಗಿಸದಿದ್ದರೆ, ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಪೊಲೀಸ್ ಇಲಾಖೆಗೂ ಎಚ್ಚರಿಕೆ ನೀಡಿದ್ದಾರೆ.


