Public Prime News

CLEAR VISION, TRUE MISSION

ಕ್ಯಾನ್ಸರ್ ತರಿಸುತ್ತಾ 'ಜಾನ್ಸನ್' ಬೇಬಿ ಪೌಡರ್? ಬರೋಬ್ಬರಿ 46,000 ಕೋಟಿ ರೂ. ಪರಿಹಾರ ನೀಡಲು ಒಪ್ಪಿದ J&J..!!
health

ಕ್ಯಾನ್ಸರ್ ತರಿಸುತ್ತಾ 'ಜಾನ್ಸನ್' ಬೇಬಿ ಪೌಡರ್? ಬರೋಬ್ಬರಿ 46,000 ಕೋಟಿ ರೂ. ಪರಿಹಾರ ನೀಡಲು ಒಪ್ಪಿದ J&J..!!

Public Prime News

Public Prime News

Reported by Public Prime News

ವಾಷಿಂಗ್ಟನ್:

ಜಗತ್ತಿನಾದ್ಯಂತ ಕೋಟ್ಯಂತರ ಮನೆಗಳಲ್ಲಿ ಬಳಕೆಯಾಗುವ ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ಇದೀಗ ಕ್ಯಾನ್ಸರ್ ವಿವಾದದ ಸುಳಿಯಲ್ಲಿ ಸಿಲುಕಿದೆ. ಅಮೆರಿಕದಲ್ಲಿ ಸಲ್ಲಿಕೆಯಾಗಿದ್ದ ಸಾವಿರಾರು ದಾವೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕಂಪನಿಯು ಭಾರಿ ಮೊತ್ತದ ಪರಿಹಾರ ನೀಡಲು ಮುಂದಾಗಿದೆ.


ಮಕ್ಕಳ ಆರೈಕೆ ಉತ್ಪನ್ನಗಳಲ್ಲಿ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯ ಬ್ರ್ಯಾಂಡ್ ಆಗಿರುವ 'ಜಾನ್ಸನ್ ಆ್ಯಂಡ್ ಜಾನ್ಸನ್' ಇದೀಗ ತನ್ನ ಟಾಲ್ಕ್ ಆಧಾರಿತ ಬೇಬಿ ಪೌಡರ್ ವಿವಾದಕ್ಕೆ ಸಂಬಂಧಿಸಿದಂತೆ ದೊಡ್ಡ ಬೆಲೆ ತೆರಲು ಸಿದ್ಧವಾಗಿದೆ. 


ತನ್ನ ಉತ್ಪನ್ನಗಳಿಂದ ಅಂಡಾಶಯದ ಕ್ಯಾನ್ಸರ್ (Ovarian Cancer) ಉಂಟಾಗಿದೆ ಎಂದು ಆರೋಪಿಸಿ ದಾಖಲಾಗಿದ್ದ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕಂಪನಿಯು ಬರೋಬ್ಬರಿ 5.5 ಬಿಲಿಯನ್ ಡಾಲರ್ (ಅಂದಾಜು ₹46,000 ಕೋಟಿಗೂ ಹೆಚ್ಚು) ಪರಿಹಾರ ನೀಡಲು ಸಮ್ಮತಿಸಿದೆ.


ಏನಿದು ಪ್ರಕರಣ..? ಹಿನ್ನೆಲೆ ಏನು..?

ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಬೇಬಿ ಪೌಡರ್ ಸೇರಿದಂತೆ ವಿವಿಧ ಟಾಲ್ಕ್  ಉತ್ಪನ್ನಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ 'ಆಸ್ಬೆಸ್ಟೋಸ್' (Asbestos) ಎಂಬ ವಿಷಕಾರಿ ಅಂಶವಿದೆ ಎಂಬುದು ಪ್ರಮುಖ ಆರೋಪವಾಗಿತ್ತು. ದೀರ್ಘಕಾಲದವರೆಗೆ ಈ ಉತ್ಪನ್ನಗಳನ್ನು ಬಳಸಿದ್ದರಿಂದಲೇ ತಮಗೆ ಅಂಡಾಶಯದ ಕ್ಯಾನ್ಸರ್ ಕಾಣಿಸಿಕೊಂಡಿದೆ ಎಂದು ಆರೋಪಿಸಿ ಅಮೆರಿಕದಾದ್ಯಂತ ಸುಮಾರು 76,000ಕ್ಕೂ ಹೆಚ್ಚು ಮಹಿಳೆಯರು ಕಂಪನಿಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು.


ಷರತ್ತುಬದ್ಧ ರಾಜಿ ಒಪ್ಪಂದ

ಕಾನೂನು ಸಮರದಿಂದ ಕಂಗೆಟ್ಟಿರುವ ಸಂಸ್ಥೆಯು ಇದೀಗ ರಾಜಿ ಸಂಧಾನಕ್ಕೆ ಮುಂದಾಗಿದ್ದು, ಈ ಬೃಹತ್ ಪರಿಹಾರ ಮೊತ್ತವನ್ನು ಘೋಷಿಸಿದೆ. ಆದರೆ, ಈ ಸಂಧಾನ ಒಪ್ಪಂದ ಸಂಪೂರ್ಣವಾಗಿ ಜಾರಿಗೆ ಬರಬೇಕಾದರೆ, ಒಟ್ಟು ದೂರುದಾರರ ಪೈಕಿ ಶೇಕಡಾ 95 ರಷ್ಟು ಮಂದಿ ಇದಕ್ಕೆ ಸಮ್ಮತಿ ಸೂಚಿಸುವುದು ಕಡ್ಡಾಯವಾಗಿದೆ.


ಆರೋಪ ತಳ್ಳಿಹಾಕಿದ ಕಂಪನಿ, ಬದಲಾಯ್ತು ಉತ್ಪನ್ನ..!

ಗ್ರಾಹಕರು ಮತ್ತು ದೂರುದಾರರ ಆರೋಪಗಳನ್ನು ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆ ಮೊದಲಿನಿಂದಲೂ ಸತತವಾಗಿ ನಿರಾಕರಿಸುತ್ತಲೇ ಬಂದಿದೆ. "ನಮ್ಮ ಬೇಬಿ ಪೌಡರ್ ಸಂಪೂರ್ಣ ಸುರಕ್ಷಿತವಾಗಿದೆ ಮತ್ತು ಅದರಲ್ಲಿ ಯಾವುದೇ ಆಸ್ಬೆಸ್ಟೋಸ್ ಅಂಶವಿಲ್ಲ" ಎಂದು ಕಂಪನಿ ಪ್ರತಿಪಾದಿಸುತ್ತಿದೆ.


ಆದಾಗ್ಯೂ, ಸಾರ್ವಜನಿಕ ವಲಯದಲ್ಲಿ ಎದುರಾದ ಆತಂಕ ಹಾಗೂ ನಿರಂತರ ಕಾನೂನು ಹೋರಾಟಗಳಿಂದಾಗಿ 2020ರಲ್ಲೇ ಅಮೆರಿಕ ಮತ್ತು ಕೆನಡಾದಲ್ಲಿ ಟಾಲ್ಕ್ ಆಧಾರಿತ ಬೇಬಿ ಪೌಡರ್ ಮಾರಾಟವನ್ನು J&J ಸ್ಥಗಿತಗೊಳಿಸಿತ್ತು. ಪ್ರಸ್ತುತ ಟಾಲ್ಕ್ ಬದಲಿಗೆ ಮೆಕ್ಕೆಜೋಳದ ಹಿಟ್ಟು ಆಧಾರಿತ ಪೌಡರ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.


ದಶಕಗಳಿಂದ ತಾಯಂದಿರು ತಮ್ಮ ಕಂದಮ್ಮಗಳಿಗಾಗಿ ಕಣ್ಮುಚ್ಚಿ ನಂಬುತ್ತಿದ್ದ ಬ್ರ್ಯಾಂಡ್ ಇಂದು ಇಷ್ಟು ದೊಡ್ಡ ಮೊತ್ತದ ಪರಿಹಾರ ನೀಡುತ್ತಿರುವುದು ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಪ್ರಸಾಧನ ಹಾಗೂ ಶಿಶು ಆರೈಕೆ ಉತ್ಪನ್ನಗಳನ್ನು ಖರೀದಿಸುವಾಗ ಗ್ರಾಹಕರು ಅದರ ಕಚ್ಚಾವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

Share this story