ಬೆಂಗಳೂರು:
ಸಾಮಾಜಿಕ ಜಾಲತಾಣಗಳು ನಮ್ಮ ಬದುಕನ್ನು ಎಷ್ಟು ಸುಲಭವಾಗಿಸಿವೆಯೋ, ಅಷ್ಟೇ ವೇಗವಾಗಿ ಅವುಗಳ ಮೂಲಕ ವಂಚನೆಯ ಜಾಲವೂ ವಿಸ್ತರಿಸಿಕೊಳ್ಳುತ್ತಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾದ ಅಪರಿಚಿತನೊಬ್ಬನ ಸುಳ್ಳು ಪ್ರೀತಿ ಮತ್ತು ದುಬಾರಿ ಉಡುಗೊರೆಯ ಆಸೆಗೆ ಬಲಿಯಾಗಿ, ಯಶವಂತಪುರದ ವಿಚ್ಛೇದಿತ ಮಹಿಳೆಯೊಬ್ಬರು ಬರೋಬ್ಬರಿ ₹1.75 ಕೋಟಿ ಹಣ ಕಳೆದುಕೊಂಡು ಬೀದಿಬೀದಿ ಅಲೆಯುವಂತಾಗಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೈಬರ್ ವಂಚಕರು ಹೆಣೆದ ಜಾಲಕ್ಕೆ ಸಿಲುಕಿ ನೊಂದಿರುವ ಈ ಮಹಿರೆಯ ಕಥೆ, ಡಿಜಿಟಲ್ ಲೋಕದಲ್ಲಿ ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಷ್ಟೆಲ್ಲಾ ಎಚ್ಚರಿಕೆ ವಹಿಸಬೇಕು ಎಂಬುದಕ್ಕೆ ಮತ್ತೊಂದು ಕಣ್ಣೀರಿನ ಎಚ್ಚರಿಕೆಯ ಗಂಟೆಯಾಗಿದೆ.
ಘಟನೆಯ ಹಿನ್ನೆಲೆ ಏನು..?
ಯಶವಂತಪುರದ ನಿವಾಸಿಯಾಗಿರುವ ವಿಚ್ಛೇದಿತ ಮಹಿಳೆಗೆ ಫೇಸ್‌ಬುಕ್ ಮೂಲಕ ವ್ಯಕ್ತಿಯೊಬ್ಬ ಪರಿಚಯವಾಗಿದ್ದನು. ತಾನು ಯುನೈಟೆಡ್ ಕಿಂಗ್‌ಡಮ್ (UK) ನಲ್ಲಿ ಉದ್ಯೋಗಿಯಾಗಿದ್ದೇನೆ ಎಂದು ಪರಿಚಯಿಸಿಕೊಂಡ ಆ ವಂಚಕ, ದಿನದಿಂದ ದಿನಕ್ಕೆ ಚಾಟಿಂಗ್ ಮೂಲಕ ಅತ್ಯಂತ ಆಪ್ತನಾಗಲು ಯತ್ನಿಸಿದ್ದಾನೆ.
ಇಬ್ಬರ ನಡುವಿನ ಮಾತುಕತೆ ವಾಟ್ಸಾಪ್‌ಗೆ ವರ್ಗಾವಣೆಗೊಂಡ ಬಳಿಕ, ಪ್ರೀತಿ ಮತ್ತು ಮಧುರ ಮಾತುಗಳ ಮೂಲಕ ಮಹಿಳೆಯ ಸಂಪೂರ್ಣ ನಂಬಿಕೆಯನ್ನು ಆತ ಸಂಪಾದಿಸಿದ್ದಾನೆ.
ಉಡುಗೊರೆಯ ಆಮಿಷ ಹಾಗೂ ಕಸ್ಟಮ್ಸ್ ನಾಟಕ..!
ಸ್ನೇಹ ಗಾಢವಾದ ಬಳಿಕ, ತಾನು ಯುಕೆಯಿಂದ ಅಪರೂಪದ ಚಿನ್ನಾಭರಣಗಳು, ವಜ್ರಾಭರಣಗಳು ಹಾಗೂ ಅತ್ಯಂತ ದುಬಾರಿ ಸೀರೆಗಳನ್ನು ಉಡುಗೊರೆಯಾಗಿ ಕಳುಹಿಸುತ್ತಿರುವುದಾಗಿ ವಂಚಕ ನಂಬಿಸಿದ್ದಾನೆ. ಮಹಿಳೆಗೆ ನಂಬಿಕೆ ಹುಟ್ಟಿಸಲು ಆ ಗಿಫ್ಟ್‌ಗಳ ಆಕರ್ಷಕ ಫೋಟೋಗಳು ಮತ್ತು ನಕಲಿ ಕೊರಿಯರ್ ರಸೀದಿಯನ್ನೂ ವಾಟ್ಸಾಪ್‌ಗೆ ಕಳುಹಿಸಿದ್ದಾನೆ.
ಸ್ವಲ್ಪ ದಿನಗಳ ನಂತರ, "ನೀವು ಕಳುಹಿಸಿದ ಉಡುಗೊರೆ ದೆಹಲಿ ಕಸ್ಟಮ್ಸ್ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲ್ಪಟ್ಟಿದೆ. ಅದನ್ನು ಬಿಡುಗಡೆ ಮಾಡಿಸಿಕೊಳ್ಳಲು ಕಸ್ಟಮ್ಸ್ ಶುಲ್ಕ ಪಾವತಿಸಬೇಕಿದೆ" ಎಂದು ವಂಚಕ ಹೊಸ ನಾಟಕ ಆರಂಭಿಸಿದ್ದಾನೆ.
"ಸದ್ಯಕ್ಕೆ ನನ್ನ ಬಳಿ ಭಾರತೀಯ ಕರೆನ್ಸಿ ಇಲ್ಲ, ನಾನು ಭಾರತಕ್ಕೆ ಬಂದ ಕೂಡಲೇ ಸಂಪೂರ್ಣ ಹಣವನ್ನು ಹಿಂದಿರುಗಿಸುತ್ತೇನೆ" ಎಂದು ಕಣ್ಣೀರಿನ ಕಥೆ ಹೇಳಿ ಮಹಿಳೆಯಿಂದ ಹಂತ ಹಂತವಾಗಿ ಹಣ ಕೀಳಲು ಮುಂದಾಗಿದ್ದಾನೆ.
ಖುದ್ದಾಗಿ ಬಂದು ಹಣ ಪಡೆದ ವಂಚಕರು
ಮಹಿಳೆಯನ್ನು ಸಂಪೂರ್ಣವಾಗಿ ಬುಟ್ಟಿಗೆ ಹಾಕಿಕೊಂಡಿದ್ದ ವಂಚಕರಿಗೆ, ಕಸ್ಟಮ್ಸ್ ಅಧಿಕಾರಿಯ ಸೋಗಿನಲ್ಲಿ ಮತ್ತೊಬ್ಬ ವ್ಯಕ್ತಿಯೂ ಸಾಥ್ ನೀಡಿದ್ದಾನೆ. ವಿವಿಧ ಶುಲ್ಕಗಳು, ಕ್ಲಿಯರೆನ್ಸ್ ಚಾರ್ಜಸ್ ಹಾಗೂ ಜಿಎಸ್‌ಟಿ ಹೆಸರಿನಲ್ಲಿ ಬೆದರಿಸಿ ಹಣ ಪಾವತಿಸುವಂತೆ ಒತ್ತಡ ಹೇರಿದ್ದಾರೆ.
ಆತಂಕಗೊಂಡ ಮಹಿಳೆ ಆರ್‌ಟಿಜಿಎಸ್ (RTGS) ಸೇರಿದಂತೆ ವಿವಿಧ ಡಿಜಿಟಲ್ ಮಾರ್ಗಗಳ ಮೂಲಕ ಕೋಟಿಗಟ್ಟಲೆ ಹಣ ವರ್ಗಾವಣೆ ಮಾಡಿದ್ದಲ್ಲದೆ, ಕೆಲವು ಸಂದರ್ಭಗಳಲ್ಲಿ ವಂಚಕರ ಸೂಚನೆಯಂತೆ ಖುದ್ದಾಗಿ ಬಂದು ಹಣ ಪಡೆದುಕೊಂಡವರ ಕೈಗೂ ನಗದು ಮುಟ್ಟಿಸಿದ್ದಾರೆ..!
ಹೀಗೆ ಹಂತ ಹಂತವಾಗಿ ಸುಮಾರು ₹1.75 ಕೋಟಿಗೂ ಅಧಿಕ ಹಣವನ್ನು ಕಳೆದುಕೊಂಡ ಬಳಿಕ ಮಹಿಳೆಗೆ ತಾನು ಮೋಸ ಹೋಗುತ್ತಿರುವುದು ಅರಿವಿಗೆ ಬಂದಿದೆ. ತಕ್ಷಣವೇ ಆ ಯುಕೆ ವ್ಯಕ್ತಿಯನ್ನು ಸಂಪರ್ಕಿಸಲು ಯತ್ನಿಸಿದಾಗ ಆತನ ಮೊಬೈಲ್ ಫೋನ್ ಶಾಶ್ವತವಾಗಿ ಸ್ವಿಚ್ ಆಫ್ ಆಗಿತ್ತು. ತಾನು ಸೈಬರ್ ವಂಚಕರ ಬಲೆಗೆ ಬಿದ್ದು ಸರ್ವಸ್ವ ಕಳೆದುಕೊಂಡಿರುವುದು ಆಗಷ್ಟೇ ಆಕೆಗೆ ಮನವರಿಕೆಯಾಗಿದೆ.
ಪೊಲೀಸ್ ತನಿಖೆ ಹಾಗೂ ಸೈಬರ್ ಎಚ್ಚರಿಕೆ
ಈ ವಂಚನೆ ಸಂಬಂಧ ಸಂತ್ರಸ್ತ ಮಹಿಳೆ ಉತ್ತರ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 318ರ ಅಡಿಯಲ್ಲಿ ಮೊಕದ್ದಮೆ ಹೂಡಿದ್ದು, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಸೈಬರ್ ತಜ್ಞರ ಎಚ್ಚರಿಕೆ ಮಾತುಗಳು:
"ವಿದೇಶದಿಂದ ಗಿಫ್ಟ್ ಬೂಮ್ ಅಥವಾ ದುಬಾರಿ ಉಡುಗೊರೆಗಳು ಬಂದಿವೆ, ಕಸ್ಟಮ್ಸ್ ಕ್ಲಿಯರೆನ್ಸ್‌ಗೆ ಹಣಹಾಕಿ ಎಂಬ ಕರೆಗಳು ಅಥವಾ ಸಂದೇಶಗಳು ಬಂದರೆ ಅವು ಸಂಪೂರ್ಣ ಸುಳ್ಳು ಮತ್ತು ಸೈಬರ್ ವಂಚಕರ ಜಾಲ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವ ಅಪರಿಚಿತರ ಪ್ರೀತಿ ಹಾಗೂ ಆಮಿಷಗಳಿಗೆ ಯಾರೂ ಬಲಿಯಾಗಬೇಡಿ" ಎಂದು ಸೈಬರ್ ಭದ್ರತಾ ತಜ್ಞರು ಮತ್ತು ಪೊಲೀಸರು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.


