Public Prime News

CLEAR VISION, TRUE MISSION

ಪ್ರಗತಿಪರ ರಾಜ್ಯದಲ್ಲೇ ಅಕ್ಷರ ವಂಚಿತರಾಗುತ್ತಿರುವ ಹೆಣ್ಣುಮಕ್ಕಳು: ಶಾಲೆ ಬಿಡುವವರ ಪಟ್ಟಿಯಲ್ಲಿ ಕರ್ನಾಟಕ ನಂ.1..!!
education

ಪ್ರಗತಿಪರ ರಾಜ್ಯದಲ್ಲೇ ಅಕ್ಷರ ವಂಚಿತರಾಗುತ್ತಿರುವ ಹೆಣ್ಣುಮಕ್ಕಳು: ಶಾಲೆ ಬಿಡುವವರ ಪಟ್ಟಿಯಲ್ಲಿ ಕರ್ನಾಟಕ ನಂ.1..!!

Public Prime News

Public Prime News

Reported by Public Prime News

ಬೆಂಗಳೂರು: 

ಪ್ರಗತಿಪರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ಹೆಮ್ಮೆಪಡುವ ಕರ್ನಾಟಕದಿಂದ ಒಂದು ಆತಂಕಕಾರಿ ಮತ್ತು ಬೆಚ್ಚಿಬೀಳಿಸುವ ವರದಿ ಹೊರಬಿದ್ದಿದೆ. 


ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ಪ್ರೌಢಶಾಲಾ ಹಂತದಲ್ಲಿ ಶಾಲೆ ತೊರೆಯುವ ಹೆಣ್ಣುಮಕ್ಕಳ ಪ್ರಮಾಣದಲ್ಲಿ ಕರ್ನಾಟಕವು ದೇಶದ ದೊಡ್ಡ ರಾಜ್ಯಗಳ ಪೈಕಿ ಅಗ್ರಸ್ಥಾನದಲ್ಲಿದೆ..!


ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳ ಕಳಪೆ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಿರಂತರವಾಗಿ ಚರ್ಚೆಯಾಗುತ್ತಿದ್ದರೂ, ಪ್ರಗತಿಪರ ರಾಜ್ಯ ಎನಿಸಿಕೊಂಡಿರುವ ಕರ್ನಾಟಕದಲ್ಲಿ ಈ ಸಮಸ್ಯೆ ತೀವ್ರವಾಗಿರುವುದು ಶಿಕ್ಷಣ ತಜ್ಞರಲ್ಲಿ ಹಾಗೂ ಪೋಷಕರಲ್ಲಿ ತೀವ್ರ ಕಳವಳ ಮೂಡಿಸಿದೆ.


ಯುಡೈಸ್ ಪ್ಲಸ್ (UDISE+) ವರದಿ:

ಕೇಂದ್ರ ಶಿಕ್ಷಣ ಸಚಿವಾಲಯದ ಇತ್ತೀಚಿನ ‘ಯುಡೈಸ್ ಪ್ಲಸ್’ (UDISE+) ವರದಿಯ ಪ್ರಕಾರ, ಕರ್ನಾಟಕದಲ್ಲಿ ಪ್ರೌಢಶಾಲಾ ಹಂತದಲ್ಲಿ ಶಾಲೆ ಬಿಡುವ ಹೆಣ್ಣುಮಕ್ಕಳ ಪ್ರಮಾಣವು ಶೇ. 13.9 ರಷ್ಟಿದೆ. ಇದು ಇಡೀ ರಾಷ್ಟ್ರೀಯ ಸರಾಸರಿ ಶೇ. 8ಕ್ಕಿಂತ ಅತ್ಯಂತ ಹೆಚ್ಚಾಗಿದೆ. 


ಇನ್ನು ವಿಶೇಷವೆಂದರೆ, ಹಿಂದೆ ಶಿಕ್ಷಣದಲ್ಲಿ ತೀರಾ ಹಿಂದುಳಿದಿದ್ದ ಬಿಹಾರ ರಾಜ್ಯವು ಹೆಣ್ಣುಮಕ್ಕಳ ಶಿಕ್ಷಣದ ಕಡೆಗೆ ವಿಶೇಷ ಗಮನಹರಿಸಿ, ತನ್ನ ಡ್ರಾಪ್‌ಔಟ್ ಪ್ರಮಾಣವನ್ನು ಶೇ. 25.1ರಿಂದ ಶೇ. 9.1ಕ್ಕೆ ಭರ್ಜರಿಯಾಗಿ ಇಳಿಸಿಕೊಂಡಿದೆ. ಆದರೆ, ಕರ್ನಾಟಕ ಮಾತ್ರ ಈ ವಿಷಯದಲ್ಲಿ ನಿರೀಕ್ಷಿತ ವೇಗದಲ್ಲಿ ಸುಧಾರಣೆ ಕಾಣುವಲ್ಲಿ ವಿಫಲವಾಗಿದೆ.


ಕಳೆದ ಮೂರು ವರ್ಷಗಳ ಕಳವಳಕಾರಿ ಚಿತ್ರಣ:

ರಾಜ್ಯದಲ್ಲಿ ಹೆಣ್ಣುಮಕ್ಕಳ ಶಾಲಾ ಡ್ರಾಪ್‌ಔಟ್ ಪ್ರಮಾಣ ವರ್ಷದಿಂದ ವರ್ಷಕ್ಕೆ ತುಸು ಇಳಿಕೆಯಾಗುತ್ತಿದ್ದರೂ, ಒಟ್ಟಾರೆ ಶೇಕಡಾವಾರು ಮಾತ್ರ ಇನ್ನೂ ಆತಂಕಕಾರಿ ಮಟ್ಟದಲ್ಲಿದೆ:


  • 2023-24: ಶೇ. 19.6


  • 2024-25: ಶೇ. 14.6


  • ಪ್ರಸ್ತುತ ಸಾಲು: ಶೇ. 13.9


ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮತ್ತು ಅಸ್ಸಾಂ (ತಲಾ ಶೇ. 13.9) ಹೆಣ್ಣುಮಕ್ಕಳ ಶಾಲಾ ತೊರೆಯುವಿಕೆಯಲ್ಲಿ ಜಂಟಿಯಾಗಿ ಮೊದಲ ಸ್ಥಾನ ಹಂಚಿಕೊಂಡಿರುವುದು ದುರದೃಷ್ಟಕರ ಸಂಗತಿಯಾಗಿದೆ.


ಶಾಲೆ ಬಿಡಲು ಪ್ರಮುಖ ಕಾರಣಗಳೇನು...?


  • ಆರ್ಥಿಕ ಸಂಕಷ್ಟ ಹಾಗೂ ಬಡತನ.


  • ಗ್ರಾಮೀಣ ಭಾಗಗಳಲ್ಲಿ ಶಾಲೆ ದೂರವಿರುವುದು ಮತ್ತು ಸಾರಿಗೆ ವ್ಯವಸ್ಥೆಯ ಕೊರತೆ.


  • ಬಾಲ್ಯವಿವಾಹ ಹಾಗೂ ಕೌಟುಂಬಿಕ ಜವಾಬ್ದಾರಿಗಳ ಹೊರೆ.


  • ಉನ್ನತ ಶಿಕ್ಷಣದ ಬಗ್ಗೆ ಜಾಗೃತಿ ಕೊರತೆ.


ಸರ್ಕಾರಗಳು ಎಷ್ಟೇ ಜನಪರ ಯೋಜನೆಗಳು ಹಾಗೂ 'ಬೇಟಿ ಬಚಾವೋ, ಬೇಟಿ ಪಡಾವೋ'ದಂತಹ ಘೋಷಣೆಗಳನ್ನು ಕೂಗಿದರೂ, ವಾಸ್ತವ ನೆಲೆಯಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕು ಹೀಗೆ ಅರ್ಧದಲ್ಲೇ ಮೊಟಕುಗೊಳ್ಳುತ್ತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. 


ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು, ವಿಶೇಷ ಆಂದೋಲನಗಳ ಮೂಲಕ ಹೆಣ್ಣುಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ.

Share this story