Public Prime News

CLEAR VISION, TRUE MISSION

ಶಾಲಾ ಸಮಯ ಬದಲಾವಣೆ ಸೇರಿ ಖಾಸಗಿ ಶಾಲೆಗಳ ಹಲವು ಬೇಡಿಕೆಗಳ ಕುರಿತು ಪರಿಶೀಲನೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ
education

ಶಾಲಾ ಸಮಯ ಬದಲಾವಣೆ ಸೇರಿ ಖಾಸಗಿ ಶಾಲೆಗಳ ಹಲವು ಬೇಡಿಕೆಗಳ ಕುರಿತು ಪರಿಶೀಲನೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ

Public Prime News

Public Prime News

Reported by Public Prime News

ಬೆಂಗಳೂರು: 
ಖಾಸಗಿ ಶಾಲೆಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನೂ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಪರಿಗಣಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಆನೇಕಲ್ ತಾಲೂಕಿನ ಖಾಸಗಿ ಶಾಲೆಗಳ ಒಕ್ಕೂಟದ ವತಿಯಿಂದ ಅತ್ತಿಬೆಲೆಯ ಸೆಂಟ್ ಫಿಲೋಮಿನಾಸ್ ಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ, ಆರನೇ ವಾರ್ಷಿಕೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಖಾಸಗಿ ಶಾಲಾ ಶಿಕ್ಷಕರೂ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಅವರ ಸೇವೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವ ಕುರಿತು ಮುಂದಿನ ದಿನಗಳಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಖಾಸಗಿ ಶಾಲೆಗಳ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ
ಖಾಸಗಿ ಶಾಲೆಗಳ ಒಕ್ಕೂಟ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದು, ಅವೆಲ್ಲವೂ ಸರ್ಕಾರದ ಗಮನದಲ್ಲಿವೆ ಎಂದು ಮಧು ಬಂಗಾರಪ್ಪ ಹೇಳಿದರು.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಯಿಂದಾಗಿ ಶಾಲಾ ಸಮಯ ಬದಲಾವಣೆ ಮಾಡುವಂತೆ ಖಾಸಗಿ ಶಾಲೆಗಳ ಪ್ರತಿನಿಧಿಗಳು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ವಿವಿಧ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಅಲ್ಲದೆ, ಖಾಸಗಿ ಶಾಲೆಗಳ ಮಾನ್ಯತೆ ಹಾಗೂ ನವೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಇತರೆ ಬೇಡಿಕೆಗಳ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಶಿಕ್ಷಕರಿಗೂ ಎಚ್‌ಆರ್‌ಎ ವಿಸ್ತರಣೆ.?
ಬೆಂಗಳೂರು ನಗರದಲ್ಲಿ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ)ಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರಿಗೂ ವಿಸ್ತರಿಸುವಂತೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ.

ಈ ಶಿಫಾರಸಿನ ಕುರಿತು ಸರ್ಕಾರ ಪರಿಶೀಲನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಜತೆಗೆ, ಖಾಸಗಿ ಶಾಲೆಗಳು ಹಣ ಪಾವತಿಸಿ ಸರ್ಕಾರಿ ಪಠ್ಯಪುಸ್ತಕಗಳನ್ನು ಪಡೆಯಲು ಅವಕಾಶ ಕಲ್ಪಿಸುವಂತೆ ಸಲ್ಲಿಸಲಾಗಿರುವ ಮನವಿಯನ್ನೂ ಪರಿಶೀಲಿಸಲಾಗುವುದು ಎಂದು ಹೇಳಿದರು.

ಸರ್ಕಾರಿ ಶಾಲೆಗಳಿಗಾಗಿ 'ಅಕ್ಷಯ' ಕಾರ್ಯಕ್ರಮ ಸ್ಮರಣೆ
ಈ ಸಂದರ್ಭದಲ್ಲಿ ತಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಆಡಳಿತಾವಧಿಯಲ್ಲಿ ಜಾರಿಗೊಳಿಸಲಾಗಿದ್ದ 'ಅಕ್ಷಯ' ಕಾರ್ಯಕ್ರಮವನ್ನು ಸಚಿವರು ಸ್ಮರಿಸಿದರು.

ಸರ್ಕಾರಿ ಶಾಲೆಗಳನ್ನು ಬಲಪಡಿಸುವುದು ಹಾಗೂ ಮಕ್ಕಳ ಶಾಲಾ ಹಾಜರಾತಿ ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿತ್ತು. ಪ್ರತಿದಿನ ಶಾಲೆಗೆ ಹಾಜರಾಗುವ ಪ್ರತಿ ಮಗುವಿಗೂ ಒಂದು ರೂಪಾಯಿ ಪ್ರೋತ್ಸಾಹಧನ ನೀಡುವ ಮೂಲಕ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವ ಪ್ರಯತ್ನ ಮಾಡಲಾಗಿತ್ತು ಎಂದು ತಿಳಿಸಿದರು.

'ಶಿಕ್ಷಣ ಇಲಾಖೆ ದೇವರ ಕೆಲಸದಂತದ್ದು'
ಕಳೆದ ಮೂರು ವರ್ಷಗಳಿಂದ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದ ಬಗ್ಗೆ ಆಳವಾದ ಅರಿವು ಪಡೆದಿದ್ದೇನೆ ಎಂದು ಮಧು ಬಂಗಾರಪ್ಪ ಹೇಳಿದರು.

ಮುಖ್ಯಮಂತ್ರಿಗಳು ಬೇರೆ ಇಲಾಖೆ ಬೇಕೇ ಎಂದು ಕೇಳಿದರೂ ಯಾವುದೇ ಮರುಯೋಚನೆ ಮಾಡದೆ ಶಿಕ್ಷಣ ಇಲಾಖೆಯನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ಒಂದು ಕೋಟಿಗೂ ಅಧಿಕ ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದ ಈ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ದೇವರ ಕೆಲಸಕ್ಕೆ ಸಮಾನ ಎಂದು ಅವರು ಅಭಿಪ್ರಾಯಪಟ್ಟರು.

ಮಧು ಬಂಗಾರಪ್ಪ ಕಾರ್ಯಕ್ಕೆ ಪುಟ್ಟಣ್ಣ ಮೆಚ್ಚುಗೆ
ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಶಿಕ್ಷಣ ಸಚಿವರಾಗಿ ಮಧು ಬಂಗಾರಪ್ಪ ಅವರು ಹಲವು ಮಹತ್ವದ ಹಾಗೂ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದ್ದು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಖಾಸಗಿ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ನವೀಕರಣಕ್ಕೆ ಸಂಬಂಧಿಸಿದ ನಿಯಮಗಳನ್ನು ಸಡಿಲಿಸುವ ಕುರಿತು ವಿಶೇಷ ಸದನ ಸಮಿತಿ ನೀಡಿರುವ ಮಧ್ಯಂತರ ವರದಿಯ ಶಿಫಾರಸುಗಳನ್ನು ಕೂಡಲೇ ಸರ್ಕಾರದ ಆದೇಶವಾಗಿ ಜಾರಿಗೆ ತರಬೇಕು ಎಂದು ಪುಟ್ಟಣ್ಣ ಸಚಿವರಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಸಮಿತಿಯ ಶಿಫಾರಸುಗಳನ್ನು ಈಗಾಗಲೇ ಶಿಕ್ಷಣ ಇಲಾಖೆಗೆ ಕಳುಹಿಸಲಾಗಿದ್ದು, ಆದ್ಯತೆಯ ಮೇರೆಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಆನೇಕಲ್ ತಾಲೂಕು ಶಾಸಕ ಶಿವಣ್ಣ, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಮತ್ತು ರಾಮೋಜಿಗೌಡ, ಕಾಮ್ಸ್ ಕಾರ್ಯದರ್ಶಿ ಶಶಿಕುಮಾರ್, ಬೆಂಗಳೂರು ದಕ್ಷಿಣ ಡಿಡಿಪಿಐ ಜಯಪ್ರಕಾಶ್ ಸೇರಿದಂತೆ ಖಾಸಗಿ ಶಾಲೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
Share this story