ಕಾರ್ಕಳ:
ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕಾನೂನು ಬಾಹಿರವಾಗಿ ಗೋಹತ್ಯೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ (ಹಿಂಜಾವೇ) ಮೇ 26ರಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (ಎಸ್ಪಿ) ಮನವಿ ಪತ್ರ ಸಲ್ಲಿಸಿದೆ.
ಹಿಂದೂಗಳ ಶ್ರದ್ಧೆಯ ಕೇಂದ್ರ ಗೋವು:
ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಗೋಹತ್ಯೆಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳು ದಾಖಲಾಗಿವೆ. ಮುಸಲ್ಮಾನರು ಹಿಂದೂಗಳ ಧಾರ್ಮಿಕ ಭಾವನೆಗಳು ಹಾಗೂ ನಂಬಿಕೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಹಿಂದೂಗಳಿಗೆ ಗೋವು ಕೇವಲ ಒಂದು ಪ್ರಾಣಿಯಲ್ಲ, ಅದು ತಾಯಿಯ ಸ್ಥಾನದಲ್ಲಿದ್ದು ನಮ್ಮ ಶ್ರದ್ಧೆಯ ಸಂಕೇತವಾಗಿದೆ. ಆದರೆ ಹಬ್ಬದ ನೆಪದಲ್ಲಿ ಇಂತಹ ಪವಿತ್ರ ಗೋವುಗಳನ್ನು ವಧೆ ಮಾಡಲಾಗುತ್ತಿದೆ. ಈ ಬಕ್ರೀದ್ ಹಬ್ಬದ ಸಂದರ್ಭದಲ್ಲೂ ವ್ಯಾಪಕ ಗೋಹತ್ಯೆ ನಡೆಯುವ ಶಂಕೆ ಇರುವುದರಿಂದ, ಪೊಲೀಸರು ಮುನ್ನೆಚ್ಚರಿಕೆ ವಹಿಸಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂಜಾವೇ ಒತ್ತಾಯಿಸಿದೆ.
ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಒತ್ತಾಯ:
'ಗೋ ಹತ್ಯೆ ಪ್ರತಿಬಂಧಕ ಕಾಯ್ದೆ 2021'ರ ಅಡಿಯಲ್ಲಿ ಗೋಹತ್ಯೆ ನಡೆಸುವವರ ಹಾಗೂ ಅವರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಹಕಾರ ನೀಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲದೆ, ಈ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗುವ ಆರೋಪಿಗಳ ಆಸ್ತಿಪಾಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ. ಬಕ್ರೀದ್ ಹಬ್ಬದ ನೆಪದಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಕಾನೂನು ವಿರೋಧಿ ಚಟುವಟಿಕೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಮನವಿ ಸಲ್ಲಿಕೆ ವೇಳೆ ಉಪಸ್ಥಿತರಿದ್ದವರು:
ಈ ಸಂದರ್ಭದಲ್ಲಿ ಹಿಂದೂ ಮುಖಂಡರುಗಳಾದ ರಾಜೇಶ್ ಉಚ್ಚಿಲ, ರತ್ನಾಕರ ಅಮೀನ್, ರಮೇಶ್ ಕಲ್ಲೊಟ್ಟೆ, ಉಮೇಶ್ ಪಕ್ಕಳ, ಉಮೇಶ ಸೂಡ, ನಿಖಿಲ್ ಮಂಚಿ, ಹರೀಶ್ ಬಜಗೋಳಿ ಹಾಗೂ ಸುನಿಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


