ಕಾರ್ಕಳ:
ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಆನಂದಿ ಮೈದಾನದಿಂದ ನಕ್ರೆ ಪೊಸನಟ್ಟು ಸಂಪರ್ಕಿಸುವ ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಸ್ಥಳೀಯರ ಬಹುದಿನಗಳ ಬೇಡಿಕೆಗೆ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಅವರು ಸ್ಪಂದಿಸಿದ್ದಾರೆ. ಈ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು 70 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದ್ದು, ಮೇ 27 ರಂದು ನಮನಪುರ ಪೊಸನೊಟ್ಟು ಕ್ರಾಸ್ ಬಳಿ ಶಾಸಕರು ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಅಧಿಕೃತ ಚಾಲನೆ ನೀಡಿದರು.
ರೂ. 55 ಲಕ್ಷ ವೆಚ್ಚದ ಮತ್ತೊಂದು ರಸ್ತೆ ಕಾಮಗಾರಿಗೂ ಚಾಲನೆ:
ಇದೇ ಸಂದರ್ಭದಲ್ಲಿ ಜ್ಯೋತಿ ನಗರ ಕೊಂಡೇನಾಕ್ಯಾರು ಗುಳಿಗ ಸ್ಥಾನ ರಸ್ತೆ ಕಾಮಗಾರಿಗೂ ಚಾಲನೆ ನೀಡಲಾಯಿತು. ಈ ಅಭಿವೃದ್ಧಿ ಕೆಲಸಕ್ಕಾಗಿ ಸುಮಾರು 55 ಲಕ್ಷ ರೂಪಾಯಿ ವೆಚ್ಚದ ಅನುದಾನವನ್ನು ಮೀಸಲಿಡಲಾಗಿದ್ದು, ಶಾಸಕರು ಕಾಯಿ ಒಡೆದು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಈ ಮೂಲಕ ಕುಕ್ಕುಂದೂರು ಗ್ರಾಮದ ಎರಡು ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಒಟ್ಟು 1.25 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ದೊರೆತಂತಾಗಿದೆ.
ಗಣ್ಯರ ಉಪಸ್ಥಿತಿ ಹಾಗೂ ಅಭಿನಂದನೆ:
ರಸ್ತೆ ಅಭಿವೃದ್ಧಿಯ ಬಹುಕಾಲದ ಕನಸನ್ನು ನನಸು ಮಾಡಿದ ಶಾಸಕರಿಗೆ ಸ್ಥಳೀಯರು ಹಾಗೂ ಪರಿಸರದ ಪ್ರಮುಖರು ಈ ಸಂದರ್ಭದಲ್ಲಿ ಧನ್ಯವಾದ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರವೀಂದ್ರ ಕುಮಾರ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಂತೋನಿ ಡಿಸೋಜಾ ಮತ್ತು ಶಶಿಮಣಿ ಸಂಪತ್, ಪ್ರಶಾಂತ್ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ, ಶೇಖರ್ ಸುವರ್ಣ, ಪ್ರಸಾದ್, ಪ್ರಾಣೇಶ್ ಶೆಟ್ಟಿ, ಹರೀಶ್ ಕುಂದರ್, ಜಯಕರ ಮಡಿವಾಳ, ಮಧುಕರ ಸುವರ್ಣ ಸೇರಿದಂತೆ ಪರಿಸರದ ಪ್ರಮುಖರು ಉಪಸ್ಥಿತರಿದ್ದರು.


