Public Prime News

CLEAR VISION, TRUE MISSION

ಪಹಲ್ಗಾಮ್ ಭೀಕರ ಉಗ್ರ ದಾಳಿಗೆ ಲಷ್ಕರ್‌ನ 'ಲಂಗ್ಡಾ' ಮಾಸ್ಟರ್‌ಮೈಂಡ್: NIA ಚಾರ್ಜ್‌ಶೀಟ್‌ನಲ್ಲಿ ಪಾಕಿಸ್ತಾನಿ ಕಮಾಂಡರ್ ಅಸಲಿ ಮುಖವಾಡ ಬಯಲು..!
kannadanadi

ಪಹಲ್ಗಾಮ್ ಭೀಕರ ಉಗ್ರ ದಾಳಿಗೆ ಲಷ್ಕರ್‌ನ 'ಲಂಗ್ಡಾ' ಮಾಸ್ಟರ್‌ಮೈಂಡ್: NIA ಚಾರ್ಜ್‌ಶೀಟ್‌ನಲ್ಲಿ ಪಾಕಿಸ್ತಾನಿ ಕಮಾಂಡರ್ ಅಸಲಿ ಮುಖವಾಡ ಬಯಲು..!

Public Prime News

Public Prime News

Reported by Public Prime News

ನವದೆಹಲಿ:

2025 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದು 26 ಅಮಾಯಕ ನಾಗರಿಕರ ಸಾವಿಗೆ ಕಾರಣವಾಗಿದ್ದ ಭೀಕರ ಭಯೋತ್ಪಾದನಾ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಮತ್ತು ಅದರ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಜಂಟಿ ಸಂಚು ರೂಪಿಸಿರುವುದು ಬಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕೃತ ಚಾರ್ಜ್‌ಶೀಟ್ ಸಲ್ಲಿಸಿದ್ದು, ಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ಮೋಸ್ಟ್ ವಾಂಟೆಡ್ ಉಗ್ರ ಸೈಫುಲ್ಲಾ ಅಲಿಯಾಸ್ ಸಾಜಿದ್ ಜಾಟ್ ಉರ್ಫ್ ಲಂಗ್ಡಾನನ್ನು ಈ ಹತ್ಯಾಕಾಂಡದ ಮಾಸ್ಟರ್‌ಮೈಂಡ್ (A1-ಪ್ರಮುಖ ಆರೋಪಿ) ಎಂದು ಹೆಸರಿಸಿದೆ.


ಪಾಕಿಸ್ತಾನದಿಂದಲೇ ದಾಳಿಯ ನೇರ ಉಸ್ತುವಾರಿ:

ಎನ್‌ಐಎ ಚಾರ್ಜ್‌ಶೀಟ್ ಪ್ರಕಾರ, ಸಾಜಿದ್ ಜಾಟ್ ಪ್ರಸ್ತುತ ಪಾಕಿಸ್ತಾನದ ಲಾಹೋರ್‌ನಲ್ಲಿ ಅಡಗಿಕೊಂಡಿದ್ದಾನೆ. ಪಹಲ್ಗಾಮ್ ದಾಳಿಯ ಸಮಯದಲ್ಲಿ ಈತ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜಿಪಿಎಸ್ ಕೋ-ಆರ್ಡಿನೇಟ್‌ಗಳನ್ನು ಹಂಚಿಕೊಳ್ಳುವ ಮೂಲಕ ದಾಳಿ ಹೇಗೆ ನಡೆಸಬೇಕು ಎಂದು ಲೈವ್ ಆಗಿ ನಿರ್ದೇಶನ ನೀಡುತ್ತಿದ್ದ ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ. ಭಯೋತ್ಪಾದಕರು ಮತ್ತು ಪಾಕಿಸ್ತಾನದ ಹ್ಯಾಂಡ್ಲರ್‌ಗಳ ನಡುವಿನ ಸಂಪರ್ಕವನ್ನು ಐಪಿ ಅಡ್ರೆಸ್‌ಗಳು, ಫೋನ್ ಸಂಖ್ಯೆಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳ ಸಮೇತ ಎನ್‌ಐಎ ಸಾಬೀತುಪಡಿಸಿದೆ.


ಯಾರು ಈ 'ಲಂಗ್ಡಾ'.?

ಮೂಲತಃ ಪಾಕಿಸ್ತಾನದ ಕಸೂರ್ ಜಿಲ್ಲೆಯವನಾದ ಸಾಜಿದ್ ಜಾಟ್, 2005 ರಲ್ಲೇ ಜಮ್ಮು-ಕಾಶ್ಮೀರಕ್ಕೆ ನುಸುಳಿದ್ದನು. 2005 ರಿಂದ 2007 ರವರೆಗೆ ಕುಲ್ಗಾಮ್‌ನಲ್ಲಿ ನೆಲೆಸಿದ್ದ ಈತ, ಅಲ್ಲಿನ ಶಾಬೀರಾ ಎಂಬ ಸ್ಥಳೀಯ ಮಹಿಳೆಯನ್ನು ಮದುವೆಯಾಗಿ ಒಬ್ಬ ಮಗನನ್ನು ಹೊಂದಿದ್ದ. ಆ ಬಳಿಕ ಪತ್ನಿಯೊಂದಿಗೆ ಪಾಕಿಸ್ತಾನಕ್ಕೆ ವಾಪಸ್ ಹೋಗಿದ್ದರೂ, ಆತನ ಮಗ ಮಾತ್ರ ಕಾಶ್ಮೀರದಲ್ಲೇ ಉಳಿದುಕೊಂಡಿದ್ದ. ಹಿಂದೆ ಕಾಶ್ಮೀರದಲ್ಲಿದ್ದಾಗ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಈತ ಒಂದು ಕಾಲನ್ನು ಕಳೆದುಕೊಂಡಿದ್ದು, ಸದ್ಯ ಕೃತಕ ಕಾಲನ್ನು ಬಳಸುತ್ತಿದ್ದಾನೆ. ಈ ಕಾರಣಕ್ಕಾಗಿಯೇ ಉಗ್ರರ ವಲಯದಲ್ಲಿ ಈತನಿಗೆ ‘ಲಂಗ್ಡಾ’ ಎಂಬ ಅನ್ವರ್ಥನಾಮವಿದೆ. ಎನ್‌ಐಎ ಪ್ರಸ್ತುತ ಈತನ ಮಗ ಮತ್ತು ಕುಟುಂಬಸ್ಥರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.


ಡ್ರೋನ್ ಮೂಲಕ ಕಳ್ಳಸಾಗಣೆ: 

ಆರ್ಟಿಕಲ್ 370 ರದ್ದತಿಯ ಬಳಿಕ TRF ಉಗ್ರ ಸಂಘಟನೆ ಬೆಳೆಸಿದ ಸಾಜಿದ್, ಗಡಿಯಾಚೆಗಿನಿಂದ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಭಾರತದೊಳಗೆ ಸಾಗಿಸುವ ಜಾಲ ಮುನ್ನಡೆಸುತ್ತಿದ್ದಾನೆ.ದಾಳಿಯ ಸಿದ್ಧತೆ: ದಕ್ಷಿಣ ಕಾಶ್ಮೀರದ ಓವರ್‌ಗ್ರೌಂಡ್ ವರ್ಕರ್ಸ್ (OGW) ನೆರವಿನಿಂದ, ದಾಳಿ ನಡೆಯುವ ಕೆಲವು ದಿನಗಳ ಮುಂಚೆಯೇ (ಏಪ್ರಿಲ್ 15-16) ಮೂವರು ಉಗ್ರರನ್ನು ಪಹಲ್ಗಾಮ್‌ನ ಬೈಸರನ್ ವ್ಯಾಲಿಗೆ ರವಾನಿಸಿ ಸಂಚು ರೂಪಿಸಲಾಗಿತ್ತು.


ಸುಳ್ಳು ಪ್ರಚಾರಕ್ಕೆ ಬ್ರೇಕ್:

ಈ ಭೀಕರ ಹತ್ಯಾಕಾಂಡವನ್ನು ಭಾರತ ಸರ್ಕಾರವೇ ಮಾಡಿದೆ ಎಂದು ಬಿಂಬಿಸಲು ಉಗ್ರರು ಆನ್‌ಲೈನ್‌ನಲ್ಲಿ ಸುಳ್ಳು ಸುದ್ದಿ ಹರಡಿದ್ದರು. ಆದರೆ, ಎನ್‌ಐಎ ತಾಂತ್ರಿಕ ಹಾಗೂ ಗುಪ್ತಚರ ಸಾಕ್ಷ್ಯಗಳ ಮೂಲಕ ಈ ಸುಳ್ಳು ಅಭಿಯಾನವನ್ನು ಪತ್ತೆಹಚ್ಚಿ, ಅಸಲಿ ಸತ್ಯವನ್ನು ಬಯಲಿಗೆಳೆದಿದೆ.

Share this story