ನವದೆಹಲಿ:
ಮಧ್ಯಪ್ರಾಚ್ಯದಲ್ಲಿ ಹೆಚ್ಚಾಗುತ್ತಿರುವ ಯುದ್ಧದ (Iran War) ಭೀತಿಯು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರ ನೇರ ಹೊಡೆತ ಈಗ ಭಾರತದ ಗ್ರಾಹಕರಿಗೆ ತಟ್ಟಿದ್ದು, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೊಮ್ಮೆ ಗಗನಕ್ಕೇರಿದೆ. ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವ ತೈಲ ಕಂಪನಿಗಳು ಕಳೆದ ಕೇವಲ ಹತ್ತು ದಿನಗಳಲ್ಲಿಯೇ ಒಟ್ಟು ಮೂರು ಬಾರಿ ಇಂಧನ ದರವನ್ನು ಹೆಚ್ಚಳ ಮಾಡಿ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿವೆ.
ಶನಿವಾರದ ಹೊಸ ದರ ಎಷ್ಟು.?
ಶನಿವಾರ ದೇಶಾದ್ಯಂತ ಪೆಟ್ರೋಲ್ ದರದಲ್ಲಿ 87 ಪೈಸೆ ಹಾಗೂ ಡೀಸೆಲ್ ದರದಲ್ಲಿ 91 ಪೈಸೆ ಏರಿಕೆ ಮಾಡಲಾಗಿದೆ. ಹೊಸ ದರ ಜಾರಿಗೆ ಬಂದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 99.51 ರೂಪಾಯಿಗೆ ತಲುಪಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 92.49 ರೂಪಾಯಿಗೆ ಬಂದು ನಿಂತಿದೆ. ಇನ್ನುಳಿದ ಪ್ರಮುಖ ಮಹಾನಗರಗಳಾದ ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾಗಳಲ್ಲಿ ಪೆಟ್ರೋಲ್ ದರ ಈಗಾಗಲೇ 100 ರೂಪಾಯಿಗಳ ಗಡಿಯನ್ನು ದಾಟಿ ಮುನ್ನುಗ್ಗುತ್ತಿದ್ದು, ವಾಹನ ಸವಾರರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
10 ದಿನದಲ್ಲಿ ₹5 ದುಬಾರಿ..!
ಕಳೆದ 10 ದಿನಗಳಲ್ಲಿ ತೈಲ ಕಂಪನಿಗಳು ಹಂತ ಹಂತವಾಗಿ ಬೆಲೆ ಏರಿಕೆ ಮಾಡಿರುವ ವಿವರ ಹೀಗಿದೆ
ಮೇ 15: ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬರೋಬ್ಬರಿ 3 ರೂಪಾಯಿ ಹೆಚ್ಚಿಸಲಾಗಿತ್ತು.
ಮೇ 19: ಕೇವಲ ನಾಲ್ಕೇ ದಿನದ ಅಂತರದಲ್ಲಿ ಮತ್ತೆ 90 ಪೈಸೆ ಏರಿಕೆ ಮಾಡಲಾಯಿತು.
ಮೇ 23 (ಶನಿವಾರ): ಪ್ರಸ್ತುತ ಪೆಟ್ರೋಲ್ ಮೇಲೆ 87 ಪೈಸೆ ಹಾಗೂ ಡೀಸೆಲ್ ಮೇಲೆ 91 ಪೈಸೆ ಹೆಚ್ಚಿಸಲಾಗಿದೆ.
ಈ ಮೂರೂ ಏರಿಕೆಗಳನ್ನು ಒಟ್ಟುಗೂಡಿಸಿದರೆ ಕಳೆದ ಹತ್ತು ದಿನಗಳಲ್ಲಿಯೇ ಇಂಧನ ದರ ಸರಿಸುಮಾರು 5 ರೂಪಾಯಿಗಳಷ್ಟು ದುಬಾರಿಯಾದಂತಾಗಿದೆ.
ಜನಸಾಮಾನ್ಯರ ಆತಂಕ:
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ದಿಢೀರ್ ಹೆಚ್ಚಳವಾಗಿರುವುದರಿಂದ, ಸಾರ್ವಜನಿಕರಿಗೆ ಒಮ್ಮೆಗೆ ಹೊರೆಯಾಗದಂತೆ ತೈಲ ಕಂಪನಿಗಳು ಹಂತಹಂತವಾಗಿ ಬೆಲೆ ಏರಿಸುತ್ತಿವೆ ಎಂದು ಹೇಳಲಾಗುತ್ತಿದೆ. ಆದರೆ, ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಸಾರ್ವಜನಿಕರಿಗೆ ಈ ಇಂಧನ ದರ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಧ್ಯಪ್ರಾಚ್ಯದ ಸಂಘರ್ಷ ಹೀಗೆಯೇ ಮುಂದುವರಿದರೆ, ಮುಂಬರುವ ದಿನಗಳಲ್ಲಿ ತೈಲ ಬೆಲೆ ಇನ್ನೂ ಕೈಗೆಟುಕದ ಮಟ್ಟಕ್ಕೆ ಏರಬಹುದು ಎಂಬ ಭೀತಿ ಸಾರ್ವಜನಿಕರನ್ನು ಕಾಡುತ್ತಿದೆ.


