Public Prime News

CLEAR VISION, TRUE MISSION

ಕರ್ನಾಟಕ ರಾಜಕೀಯದಲ್ಲಿ ಮಹಾ ತಿರುವು! ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್; ಫೋಟೋ ವೈರಲ್
politics

ಕರ್ನಾಟಕ ರಾಜಕೀಯದಲ್ಲಿ ಮಹಾ ತಿರುವು! ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್; ಫೋಟೋ ವೈರಲ್

Public Prime News

Public Prime News

Reported by Public Prime News

ಬೆಂಗಳೂರು: 

ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ಬದಲಾವಣೆ ಹಾಗೂ ನಾಯಕತ್ವ ಬದಲಾವಣೆಯ ದಟ್ಟ ವದಂತಿಗಳ ನಡುವೆಯೇ ಇತ್ತೀಚೆಗೆ ಅತ್ಯಂತ ಅಪರೂಪದ ಹಾಗೂ ಭಾವುಕ ಕ್ಷಣವೊಂದು ಕಂಡುಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ಮಹತ್ವದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ಸಚಿವರು ಹಾಗೂ ಪ್ರಮುಖ ನಾಯಕರಿಗಾಗಿ ಹಠಾತ್ ಉಪಾಹಾರ ಸಭೆ ಆಯೋಜಿಸಿದ್ದರು. ಈ ಸಭೆಗೆ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾದ ತಕ್ಷಣ ಗೌರವಪೂರ್ವಕವಾಗಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಬಳಿಕ ಉಭಯ ನಾಯಕರು ಅತ್ಯಂತ ಆತ್ಮೀಯವಾಗಿ ಪರಸ್ಪರ ಆಲಂಗಿಸಿಕೊಂಡರು. ಮುಖ್ಯಮಂತ್ರಿಗಳ ಕಚೇರಿಯೇ ಈ ಭಾವುಕ ಕ್ಷಣಗಳ ಫೋಟೋಗಳನ್ನು ಅಧಿಕೃತವಾಗಿ ಹಂಚಿಕೊಂಡಿದ್ದು, ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿವೆ.


ಈ ಭೇಟಿಯ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ. ಪರಮೇಶ್ವರ್ ಅವರು ಸ್ಪೋಟಕ ಮಾಹಿತಿ ನೀಡಿದ್ದಾರೆ. "ಮುಖ್ಯಮಂತ್ರಿಗಳು ತಾವು ರಾಜೀನಾಮೆ ನೀಡುವ ಮುನ್ನ ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳಿಗೆ ಇದುವರೆಗೆ ನೀಡಿದ ಸಹಕಾರಕ್ಕಾಗಿ ಧನ್ಯವಾದ ಅರ್ಪಿಸಲು ಈ ಸಭೆ ಕರೆದಿದ್ದಾರೆ" ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರ ರಾಜೀನಾಮೆ ಬಹುತೇಕ ಖಚಿತ ಎಂಬ ಸುಳಿವು ನೀಡಿದ್ದಾರೆ.


ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಮುಂಚಿತವಾಗಿಯೇ ಮಾಡಿಕೊಂಡಿದ್ದ ಅಧಿಕಾರ ಹಂಚಿಕೆ ಸೂತ್ರದಂತೆ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡಲು ದೆಹಲಿ ಹೈಕಮಾಂಡ್ ಒಲವು ತೋರಿದೆ ಎನ್ನಲಾಗಿದೆ. ಈಗಾಗಲೇ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮುಂಭಾಗ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಾಚರಣೆ ಶುರು ಮಾಡಿದ್ದು, ಮುಂದಿನ ಕೆಲವೇ ಗಂಟೆಗಳಲ್ಲಿ ಕರ್ನಾಟಕ ರಾಜಕೀಯದಲ್ಲಿ ಅಧಿಕೃತವಾಗಿ ಹೊಸ ನಾಯಕತ್ವದ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ.

Share this story