Public Prime News

CLEAR VISION, TRUE MISSION

ದುಬಾರೆ ದುರಂತ: ತಜ್ಞರ ಎಚ್ಚರಿಕೆ ಗಾಳಿಗೆ ತೂರಿದ ಅರಣ್ಯ ಇಲಾಖೆ; ಪ್ರವಾಸಿಗರ ಪ್ರಾಣದ ಜೊತೆ ಚೆಲ್ಲಾಟವಾಡಿದ ನಿಯಮಗಳ ಉಲ್ಲಂಘನೆ!
crime

ದುಬಾರೆ ದುರಂತ: ತಜ್ಞರ ಎಚ್ಚರಿಕೆ ಗಾಳಿಗೆ ತೂರಿದ ಅರಣ್ಯ ಇಲಾಖೆ; ಪ್ರವಾಸಿಗರ ಪ್ರಾಣದ ಜೊತೆ ಚೆಲ್ಲಾಟವಾಡಿದ ನಿಯಮಗಳ ಉಲ್ಲಂಘನೆ!

Public Prime News

Public Prime News

Reported by Public Prime News

ಕುಶಾಲನಗರ: 
ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಆನೆ ಶಿಬಿರದಲ್ಲಿ ಇತ್ತೀಚೆಗೆ ನಡೆದ ಆನೆಗಳ ನಡುವಿನ ಜಗಳ ಮತ್ತು ಪ್ರವಾಸಿ ಮಹಿಳೆಯ ಸಾವಿನ ದುರಂತದ ಹಿಂದೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಆನೆಗಳ ನಡವಳಿಕೆ ಮತ್ತು ಶಿಬಿರದ ಸುರಕ್ಷತೆಗೆ ಸಂಬಂಧಿಸಿದಂತೆ ವನ್ಯಜೀವಿ ತಜ್ಞರು ನೀಡಿದ್ದ ಎಚ್ಚರಿಕೆ ಹಾಗೂ ನಿಗದಿಪಡಿಸಿದ್ದ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು (SOP) ಅರಣ್ಯ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದೇ ಈ ಭೀಕರ ಅವಘಡಕ್ಕೆ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ದುರಂತಕ್ಕೆ ಕಾರಣಗಳೇನು..?


  • ನಿಯಮಗಳ ಉಲ್ಲಂಘನೆ:

  • ಆನೆಗಳು ಮತ್ತು ಪ್ರವಾಸಿಗರ ನಡುವೆ ಕನಿಷ್ಠ ಸುರಕ್ಷಿತ ಅಂತರ ಇರಬೇಕೆಂಬ ನಿಯಮವಿದ್ದರೂ, ಪ್ರವಾಸಿಗರಿಗೆ ಆನೆಗಳ ತೀರಾ ಹತ್ತಿರ ಹೋಗಲು, ಮುಟ್ಟಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಮುಕ್ತ ಅವಕಾಶ ನೀಡಲಾಗಿತ್ತು.


  • ಆನೆಗಳ 'ಮಸ್ತ್' ಸ್ಥಿತಿ ಕಡೆಗಣನೆ: 

  • ಜಗಳವಾಡಿದ 'ಕಂಜನ್' ಮತ್ತು 'ಮಾರ್ತಾಂಡ' ಆನೆಗಳಿಗೆ ಈ ಹಿಂದೆಯೂ ಆಕ್ರಮಣಕಾರಿ ನಡವಳಿಕೆಯ ಇತಿಹಾಸವಿತ್ತು. ಆದರೂ ಇಲಾಖೆಯು ಇವುಗಳನ್ನು ಸಾರ್ವಜನಿಕವಾಗಿ ನದಿಯಲ್ಲಿ ಸ್ನಾನ ಮಾಡಿಸಲು ಒಟ್ಟಿಗೆ ಕರೆತಂದು ದೊಡ್ಡ ನಿರ್ಲಕ್ಷ್ಯ ವಹಿಸಿದೆ.


ಘಟನೆ ನಡೆದಿದ್ದು ಹೇಗೆ?

ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವಾಗ 'ಕಂಜನ್' ಮತ್ತು 'ಮಾರ್ತಾಂಡ' ಆನೆಗಳ ನಡುವೆ ಭೀಕರ ಕಾಳಗ ನಡೆದಿದೆ. ಕಂಜನ್ ಆನೆ ತಳ್ಳಿದ ರಭಸಕ್ಕೆ ಮಾರ್ತಾಂಡ ಆನೆ ನಿಯಂತ್ರಣ ತಪ್ಪಿ ನದಿಯ ದಂಡೆಯಲ್ಲಿದ್ದ ತಮಿಳುನಾಡಿನ ಪ್ರವಾಸಿ ಮಹಿಳೆ ತುಳಸಿ (33) ಅವರ ಮೇಲೆ ಬಿದ್ದಿದೆ. ಆನೆಯ ಭಾರಕ್ಕೆ ಸಿಲುಕಿದ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಅವರ ಪತಿ ಮತ್ತು ಮಗು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.


ಈಗ ರಾಜ್ಯಾದ್ಯಂತ ಕಠಿಣ ನಿಯಮ ಜಾರಿ.!

ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ದುಬಾರೆ ಶಿಬಿರವನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶಿಸಿದ್ದು, ರಾಜ್ಯದ ಎಲ್ಲಾ 14 ಆನೆ ಶಿಬಿರಗಳಿಗೆ ಹೊಸ ಕಠಿಣ ನಿಯಮಗಳನ್ನು ಘೋಷಿಸಿದ್ದಾರೆ.

  1. 100 ಅಡಿ ದೂರ ಕಡ್ಡಾಯ:

  2. ಪ್ರವಾಸಿಗರು ಆನೆಗಳಿಂದ ಕನಿಷ್ಠ 100 ಅಡಿ ದೂರ ನಿಂತು ಮಾತ್ರ ನೋಡಬೇಕು.


  3. ಸಂಪರ್ಕ ನಿಷೇಧ:

  4. ಆನೆಗಳನ್ನು ಮುಟ್ಟುವುದು, ಸೊಂಡಿಲು ಹಿಡಿಯುವುದು ಮತ್ತು ಹತ್ತಿರ ನಿಂತು ಸೆಲ್ಫಿ ತೆಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.


  5. ಸ್ನಾನ ಮತ್ತು ಆಹಾರ ಬಂದ್:

  6. ಪ್ರವಾಸಿಗರು ಆನೆಗಳಿಗೆ ನದಿಯಲ್ಲಿ ಸ್ನಾನ ಮಾಡಿಸುವಂತಿಲ್ಲ ಹಾಗೂ ಯಾವುದೇ ಆಹಾರ ನೀಡುವಂತಿಲ್ಲ.


ತಜ್ಞರ ಆಕ್ರೋಶ:

"ಒಂದು ಅಮೂಲ್ಯ ಪ್ರಾಣ ಹೋದ ಮೇಲೆ ಇಲಾಖೆಗೆ ನಿಯಮಗಳ ನೆನಪಾಗಿದೆ. ಮೊದಲೇ ಮುನ್ನೆಚ್ಚರಿಕೆ ವಹಿಸಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು" ಎಂದು ವನ್ಯಜೀವಿ ಸಂರಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.








Share this story