ಭಟ್ಕಳ:
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಸಮೀಪದ ತಟ್ಟೆಹಕ್ಕಲು (ವೆಂಕಟಾಪುರ) ನದಿಯಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋದ ಒಂದೇ ಕುಟುಂಬದ 8 ಮಂದಿ ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿರುವ ಅತ್ಯಂತ ದಾರುಣ ಮತ್ತು ಘೋರ ದುರಂತ ಭಾನುವಾರ ಸಂಭವಿಸಿದೆ.
ಏಕಾಏಕಿ ಹೆಚ್ಚಿದ ನೀರಿನ ಸೆಳೆತ:
ವರದಿಗಳ ಪ್ರಕಾರ, ಭಟ್ಕಳ ತಾಲೂಕಿನ ಸಾರದಹೊಳೆಯ ಹೆರಿಹಿತ್ಲು ಮೂಲದ ನಿವಾಸಿಗಳಾಗಿದ್ದ ಒಟ್ಟು 14ಜನರಿದ್ದ ತಂಡವೊಂದು ಕಪ್ಪೆಚಿಪ್ಪು (ಚಿಪ್ಪು) ತೆಗೆಯಲು ಅಳಿವೆಕೋಡಿ/ತಟ್ಟೆಹಕ್ಕಲು ನದಿಗೆ ಇಳಿದಿತ್ತು. ಈ ವೇಳೆ ನೀರಿನಲ್ಲಿ ಚಿಪ್ಪುಗಳನ್ನು ಹೆಕ್ಕುತ್ತಿದ್ದಾಗ ಏಕಾಏಕಿ ಭಾರಿ ನೀರಿನ ಸೆಳೆತ ಉಂಟಾಗಿದೆ. ನೋಡನೋಡುತ್ತಿದ್ದಂತೆಯೇ ಇಡೀ ತಂಡ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದೆ. ಈ ಭೀಕರ ಅವಘಡದಲ್ಲಿ 8 ಮಂದಿ ಸಾವನ್ನಪ್ಪಿದ್ದು, ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತಪಟ್ಟವರೆಲ್ಲರೂ ಒಂದೇ ಕುಟುಂಬದವರಾಗಿದ್ದಾರೆ ಎಂದು ದೃಢಪಟ್ಟಿದೆ.
ಮೃತರ ವಿವರ:
ದುರಂತದಲ್ಲಿ ಮಡಿದವರ ಪೈಕಿ ಏಳು ಮಹಿಳೆಯರು ಹಾಗೂ ಒಬ್ಬ ಪುರುಷ ಸೇರಿದ್ದಾರೆ. ಆರು ಮೃತದೇಹಗಳನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಹಾಗೂ ಇಬ್ಬರ ಮೃತದೇಹಗಳನ್ನು ಮುರುಡೇಶ್ವರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಭಟ್ಕಳ ಆಸ್ಪತ್ರೆಯಲ್ಲಿರುವ ಮೃತರು:
ಲಕ್ಷ್ಮಿ ಮಾದೇವ ನಾಯ್ಕ (38 ವರ್ಷ), ಲಕ್ಷ್ಮಿ ಮಹಾದೇವ ನಾಯ್ಕ, ಲಕ್ಷ್ಮಿ ಶಿವರಾಂ ನಾಯ್ಕ (39 ವರ್ಷ), ಉಮೇಶ್ ಮಂಜುನಾಥ್ ನಾಯ್ಕ (42 ವರ್ಷ), ಮಾಸ್ತಮ್ಮ ಮಂಜುನಾಥ್ ನಾಯ್ಕ (43 ವರ್ಷ) ಮತ್ತು ಲಕ್ಷ್ಮಿ ಅಣ್ಣಪ್ಪ ನಾಯ್ಕ (44 ವರ್ಷ).
ಮುರುಡೇಶ್ವರ ಆಸ್ಪತ್ರೆಯಲ್ಲಿರುವ ಮೃತರು:
ಜ್ಯೋತಿ ನಾಗಪ್ಪ ನಾಯ್ಕ (37 ವರ್ಷ) ಹಾಗೂ ಮಾಲತಿ ಜಟ್ಟಪ್ಪ ನಾಯ್ಕ (38 ವರ್ಷ).
ಮೂವರು ನಾಪತ್ತೆ - ರಕ್ಷಣಾ ಕಾರ್ಯ ಚುರುಕು:
ಇದೇ ಘಟನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿ ಒಟ್ಟು ಮೂವರು ನೀರಿನಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರನ್ನು ಮಾದೇವ ಜಟ್ಟಪ್ಪ ನಾಯ್ಕ (52 ವರ್ಷ), ಮಂಜಮ್ಮ ಗೊತ್ತಾ ನಾಯ್ಕ (50 ವರ್ಷ) ಹಾಗೂ ನಾಗರತ್ನ ಪರಮೇಶ್ವರ್ ನಾಯ್ಕ (40 ವರ್ಷ) ಎಂದು ಗುರುತಿಸಲಾಗಿದೆ. ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ನದಿಯಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ. ಘಟನೆಯಲ್ಲಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಕಂಬನಿ:
ತಲಾ 5 ಲಕ್ಷ ರೂ. ಪರಿಹಾರ
ಈ ಭೀಕರ ದುರಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಕಳವಳ ಮತ್ತು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿರುವ ಅವರು, "ಇದು ಅತ್ಯಂತ ದುರದೃಷ್ಟಕರ ಘಟನೆ. ಮೃತರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ನಾಪತ್ತೆಯಾದವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ" ಎಂದು ತಿಳಿಸಿದ್ದಾರೆ.
ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿದ ಈ ಘಟನೆ ಭಟ್ಕಳ ತಾಲೂಕಿನಾದ್ಯಂತ ಭಾರಿ ಶೋಕದ ವಾತಾವರಣ ನಿರ್ಮಿಸಿದೆ.


