Public Prime News

CLEAR VISION, TRUE MISSION

ಡಿಸಿಎಂ ಡಿ.ಕೆ. ಶಿವಕುಮಾರ್ ಹುಟ್ಟುಹಬ್ಬಕ್ಕೆ ವಿಶೇಷ ಗಿಫ್ಟ್: ಡಿಕೆಶಿ ಗ್ಯಾರೇಜ್ ಸೇರಿದ ಹೊಚ್ಚ ಹೊಸ ‘ಯೆಜ್ಡಿ ರೋಡ್ಸ್ಟರ್’ ಬೈಕ್..!
local-news

ಡಿಸಿಎಂ ಡಿ.ಕೆ. ಶಿವಕುಮಾರ್ ಹುಟ್ಟುಹಬ್ಬಕ್ಕೆ ವಿಶೇಷ ಗಿಫ್ಟ್: ಡಿಕೆಶಿ ಗ್ಯಾರೇಜ್ ಸೇರಿದ ಹೊಚ್ಚ ಹೊಸ ‘ಯೆಜ್ಡಿ ರೋಡ್ಸ್ಟರ್’ ಬೈಕ್..!

Pavithra K

Pavithra K

Reported by Public Prime News

ಬೆಂಗಳೂರು: 

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಾರಿಯ ಜನ್ಮದಿನದ ಅಂಗವಾಗಿ ಅತ್ಯಂತ ಅಪರೂಪದ ಹಾಗೂ ವಿಶೇಷವಾದ ಉಡುಗೊರೆಯೊಂದು ಲಭಿಸಿದೆ. ಹಳೆಯ ಕಾಲದ ಕ್ಲಾಸಿಕ್ ಬೈಕ್‌ಗಳ, ಅದ್ರಲ್ಲೂ ಪ್ರಮುಖವಾಗಿ ‘ಯೆಜ್ಡಿ’ ಬ್ರ್ಯಾಂಡ್‌ನ ಅಪ್ಪಟ ಅಭಿಮಾನಿಯಾಗಿರುವ ಡಿಸಿಎಂ ಅವರಿಗೆ, ಹುಟ್ಟುಹಬ್ಬದ ನೆನಪಿಗಾಗಿ ಹೊಚ್ಚ ಹೊಸ ‘ರೆಡ್ ವೂಲ್ಫ್ʼ ಬಣ್ಣದ ಯೆಜ್ಡಿ ರೋಡ್ಸ್ಟರ್ (Yezdi Roadster) ಬೈಕ್ ಅನ್ನು ಗಿಫ್ಟ್ ಆಗಿ ನೀಡಲಾಗಿದೆ.


ಡಿ.ಕೆ. ಶಿವಕುಮಾರ್ ಅವರಿಗೆ ಮೊದಲಿನಿಂದಲೂ ಯೆಜ್ಡಿ ಬೈಕ್‌ಗಳೆಂದರೆ ಎಲ್ಲಿಲ್ಲದ ಕ್ರೇಜ್. ತಮಗೆ ಇಷ್ಟವಾದ ಈ ಕ್ಲಾಸಿಕ್ ಬೈಕ್ ಅನ್ನು ಉಡುಗೊರೆಯಾಗಿ ಸ್ವೀಕರಿಸುತ್ತಿದ್ದಂತೆ ಅವರು ಹಳೆಯ ನೆನಪುಗಳ ಲೋಕಕ್ಕೆ ಜಾರಿದರು. ತಾವು ಯುವಕರಾಗಿದ್ದ ದಿನಗಳಲ್ಲಿ ಇದೇ ಯೆಜ್ಡಿ ಬೈಕ್ ಏರಿ ಬೆಂಗಳೂರಿನ ರಸ್ತೆಗಳಲ್ಲಿ ಲಾಂಗ್ ರೈಡ್ ಮಾಡುತ್ತಿದ್ದ ಮಧುರ ಕ್ಷಣಗಳನ್ನು ಅವರು ಅತ್ಯಂತ ಉತ್ಸಾಹದಿಂದ ಮೆಲುಕು ಹಾಕಿದರು.


ನಮ್ಮ ಸಿಲಿಕಾನ್ ಸಿಟಿ ಬೆಂಗಳೂರು ಕೇವಲ ಐಟಿ-ಬಿಟಿ, ಎಐ ಅಥವಾ ಆಧುನಿಕ ತಂತ್ರಜ್ಞಾನಕ್ಕೆ ಮಾತ್ರ ಸೀಮಿತವಾಗಿಲ್ಲ; ಇದು ತನ್ನದೇ ಆದ ವಿಶಿಷ್ಟ ‘ಬೈಕ್-ರೈಡಿಂಗ್ ಕಲ್ಚರ್’ಗೂ ಜಗತ್ಪ್ರಸಿದ್ಧಿಯಾಗಿದೆ. ಇಂದಿನ ಹೈಟೆಕ್ ಯುಗದಲ್ಲೂ ಬೆಂಗಳೂರಿನ ಯುವ ಪೀಳಿಗೆ ಹಾಗೂ ಹಳೆಯ ಬೈಕ್ ಪ್ರೇಮಿಗಳ ಹೃದಯದಲ್ಲಿ ಯೆಜ್ಡಿ ಬ್ರ್ಯಾಂಡ್ ವಿಶೇಷ ಸ್ಥಾನವನ್ನು ಕಾಯ್ದುಕೊಂಡಿದೆ.

 ಇಂದಿಗೂ ಇದು ಯುವಜನತೆಯ ಸ್ವಾತಂತ್ರ್ಯ ಮತ್ತು ಸಾಹಸದ ಪ್ರತೀಕವಾಗಿ ಗುರುತಿಸಲ್ಪಡುತ್ತಿದೆ.


ಸಂತಸ ಹಂಚಿಕೊಂಡ ಉಪಮುಖ್ಯಮಂತ್ರಿಗಳು: 

ಬೆಂಗಳೂರಿನ ಪ್ರಸಿದ್ಧ ಸಫೀನಾ ಮೋಟಾರ್ಸ್‌ನ ಮುಖ್ಯಸ್ಥರಾದ ಫಿರೋಜ್ ಸತ್ತಾರ್ ಸೇಠ್ ಅವರು ಉಪಮುಖ್ಯಮಂತ್ರಿಗಳ ನಿವಾಸಕ್ಕೆ ಖುದ್ದಾಗಿ ಭೇಟಿ ನೀಡಿ, ಈ ಹೊಚ್ಚ ಹೊಸ ಬೈಕ್ ಅನ್ನು ಜನ್ಮದಿನದ ಕಾಣಿಕೆಯಾಗಿ ಹಸ್ತಾಂತರಿಸಿದರು.


ಬೈಕ್ ಕೀ ಪಡೆದು ಮಾತನಾಡಿದ ಡಿ.ಕೆ. ಶಿವಕುಮಾರ್, "ನನ್ನ ವಾಹನಗಳ ಸಂಗ್ರಹಕ್ಕೆ ಈ ಹೊಸ ಯೆಜ್ಡಿ ರೋಡ್ಸ್ಟರ್ ಸೇರ್ಪಡೆಯಾಗುತ್ತಿರುವುದು ನನಗೆ ಅಪಾರ ಸಂತಸ ತಂದಿದೆ. ಶೀಘ್ರದಲ್ಲೇ ಈ ಬೈಕ್ ಹತ್ತಿ ಒಂದು ರೈಡ್ ಹೋಗಲು ನಾನು ಕಾಯುತ್ತಿದ್ದೇನೆ. ಪ್ರತಿಯೊಬ್ಬ ನಿಜವಾದ ಬೈಕ್ ರೈಡರ್‌ನ ಆಕಾಂಕ್ಷೆ ಮತ್ತು ಸಾಧನೆಯನ್ನು ಬಿಂಬಿಸುವ ಇಂತಹ ಕ್ಲಾಸಿಕ್ ಬ್ರ್ಯಾಂಡ್ ಅನ್ನು ನೋಡುವುದೇ ಒಂದು ಅದ್ಭುತ ಅನುಭವ" ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು.


ಏನಿದು ‘ರೆಡ್ ವೂಲ್ಫ್’ ವಿಶೇಷತೆ? 

ಡಿಸಿಎಂ ಅವರಿಗೆ ಗಿಫ್ಟ್ ಆಗಿ ನೀಡಿರುವ ‘ರೆಡ್ ವೂಲ್ಫ್’ ಬಣ್ಣದ ಯೆಜ್ಡಿ ರೋಡ್ಸ್ಟರ್ ಬೈಕ್ ರಸ್ತೆಗೆ ಇಳಿದರೆ ರಾಜಗಾಂಭೀರ್ಯದ ಲುಕ್ ನೀಡುತ್ತದೆ. ಇದು ಹಳೆಯ ಕಾಲದ ಸಾಂಪ್ರದಾಯಿಕ ವಿನ್ಯಾಸದ ಅಂದವನ್ನು ಹಾಗೇ ಉಳಿಸಿಕೊಂಡು, ಇಂದಿನ ತಲೆಮಾರಿಗೆ ತಕ್ಕಂತೆ ಅತ್ಯಾಧುನಿಕ ಎಂಜಿನಿಯರಿಂಗ್ ತಂತ್ರಜ್ಞಾನ ಹಾಗೂ ಪ್ರೀಮಿಯಂ ಫೀಚರ್‌ಗಳನ್ನು ಒಳಗೊಂಡಿದೆ. 


ಇಂದಿನ ಯುವ ಬೈಕ್ ಸವಾರರನ್ನು ಸೆಳೆಯುವ ಎಲ್ಲಾ ಆಕರ್ಷಕ ಅಂಶಗಳು ಈ ಮಾಡೆಲ್‌ನಲ್ಲಿವೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ಯೆಜ್ಡಿ ಸಂಸ್ಥೆಯು ಹಾರ್ದಿಕ ಶುಭಾಶಯಗಳನ್ನು ಕೋರಿದ್ದು, ಮುಂಬರುವ ದಿನಗಳಲ್ಲಿ ಈ ಹೊಸ ಬೈಕ್‌ನೊಂದಿಗೆ ಅವರ ಪಯಣ ಮತ್ತಷ್ಟು ಸ್ಮರಣೀಯವಾಗಲಿ ಎಂದು ಶುಭ ಹಾರೈಸಿದೆ.

Share this story