ಹೆಬ್ರಿ:
ದೈವ ಸಾನಿಧ್ಯದಲ್ಲಿ ಮಜಿಪು ನುಡಿಯುವ ಬಿಲ್ಲವ ಸಮುದಾಯದ ಯುವಕನಿಗೆ ಅನ್ಯ ಸಮುದಾಯದ ವ್ಯಕ್ತಿಯೊಬ್ಬ ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿರುವ ಗಂಭೀರ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರವ ಸಮುದಾಯದ ಕೋಲ ಕಟ್ಟುವ ಗುಂಡು ಪರವ ಎಂಬಾತನೇ ಬಿಲ್ಲವ ಯುವಕನಿಗೆ ನಿಂದಿಸಿದ ಆರೋಪಿಯಾಗಿದ್ದಾನೆ. ಈತ ಮಧ್ಯರಾತ್ರಿಯ ವೇಳೆ ಯುವಕನಿಗೆ ಫೋನ್ ಕರೆ ಮಾಡಿ, ಇಡೀ ಬಿಲ್ಲವ ಸಮಾಜದ ಬಗ್ಗೆ ಹಾಗೂ ಯುವಕ ಮತ್ತು ಆತನ ತಾಯಿಯ ವಿರುದ್ಧ ಅತ್ಯಂತ ಕೀಳು ಮಟ್ಟದ ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ನಡೆಸಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಈ ನಿಂದನಾ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಹೆಬ್ರಿ ಬಿಲ್ಲವ ಸಂಘದ ಪದಾಧಿಕಾರಿಗಳು ಹಾಗೂ ಪ್ರಮುಖರು ಹೆಬ್ರಿ ಪೊಲೀಸ್ ಠಾಣಾಧಿಕಾರಿಗಳನ್ನು ಭೇಟಿ ಮಾಡಿ ಅಧಿಕೃತವಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಬಿಲ್ಲವ ಸಂಘದ ಪದಾಧಿಕಾರಿಗಳು, "ಪವಿತ್ರವಾದ ದೈವ ಸಾನಿಧ್ಯ ಮತ್ತು ಇಡೀ ಬಿಲ್ಲವ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಆರೋಪಿಯು ನಿಂದನೆ ಮಾಡಿದ್ದಾನೆ.
ಈ ಪ್ರಕರಣವನ್ನು ಪೊಲೀಸರು ಅತ್ಯಂತ ಕೂಲಂಕುಶವಾಗಿ ಮತ್ತು ಗಂಭೀರವಾಗಿ ತನಿಖೆ ನಡೆಸಬೇಕು. ಯುವಕ ಹಾಗೂ ಬಿಲ್ಲವ ಸಮುದಾಯದ ವಿರುದ್ಧ ಕೀಳು ಮಟ್ಟದ ಪದಬಳಕೆ ಮಾಡಿದ ವ್ಯಕ್ತಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು" ಎಂದು ತೀವ್ರವಾಗಿ ಆಗ್ರಹಿಸಿದ್ದಾರೆ.
ಸದ್ಯ ಬಿಲ್ಲವ ಸಂಘದ ದೂರಿನ ಅನ್ವಯ ಹೆಬ್ರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ತನಿಖೆಯನ್ನು ಚುರುಕುಗೊಳಿಸಿದ್ದಾರೆ.


