ಶಿವಮೊಗ್ಗ:
ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ 5ನೇ ಗ್ಯಾರಂಟಿ ಯೋಜನೆಯಾದ ‘ಯುವನಿಧಿ’ ಫಲಾನುಭವಿಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳು ಮಹತ್ವದ ಸುದ್ದಿಯೊಂದನ್ನು ನೀಡಿದ್ದಾರೆ. ಇನ್ನು ಮುಂದೆ ಯೋಜನೆಯ ಲಾಭ ಪಡೆಯಲು ಪ್ರತಿ ತಿಂಗಳು ಆನ್‌ಲೈನ್‌ನಲ್ಲಿ ಸ್ವಯಂ ಘೋಷಣೆ (Self Declaration) ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಬದಲಾಗಿದೆ ನಿಯಮ:
3 ತಿಂಗಳಿಗೊಮ್ಮೆ ಅಲ್ಲ, ಪ್ರತಿ ತಿಂಗಳು ಕಡ್ಡಾಯ..!
ಈ ಹಿಂದೆ ಫಲಾನುಭವಿಗಳು ತ್ರೈಮಾಸಿಕವಾಗಿ (ಮೂರು ತಿಂಗಳಿಗೊಮ್ಮೆ) ಸ್ವಯಂ ಘೋಷಣೆ ಸಲ್ಲಿಸುವ ನಿಯಮವಿತ್ತು. ಆದರೆ ಈಗ ಈ ನಿಯಮವನ್ನು ಬದಲಾಯಿಸಲಾಗಿದ್ದು, ಅರ್ಹ ಫಲಾನುಭವಿಗಳು ಪ್ರತಿ ತಿಂಗಳ 25ನೇ ತಾರೀಖಿನ ಒಳಗಾಗಿ 'ಸೇವಾ ಸಿಂಧು' ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ಸ್ವಯಂ ಘೋಷಣೆಯನ್ನು ಕಡ್ಡಾಯವಾಗಿ ಅಪ್‌ಡೇಟ್ ಮಾಡಬೇಕಾಗುತ್ತದೆ.
ಒಂದು ವೇಳೆ ನಿಗದಿತ ದಿನಾಂಕದೊಳಗೆ ಸ್ವಯಂ ಘೋಷಣೆ ಸಲ್ಲಿಸಲು ವಿಫಲರಾದರೆ, ಆಯಾ ತಿಂಗಳ ನಿರುದ್ಯೋಗ ಭತ್ಯೆಯ ಹಣವು ನಿಮ್ಮ ಬ್ಯಾಂಕ್ ಖಾತೆಗೆ (DBT ಮೂಲಕ) ಜಮಾ ಆಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಯಾರೆಲ್ಲಾ ಈ ಯೋಜನೆಗೆ ಅರ್ಹರು.?
2023ರ ನಂತರ ಸ್ನಾತಕೋತ್ತರ ಪದವಿ (PG), ಪದವಿ (Degree) ಅಥವಾ ಡಿಪ್ಲೋಮಾ ಮುಗಿಸಿದ ನಿರುದ್ಯೋಗಿ ಯುವಕ-ಯುವತಿಯರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಕೋರ್ಸ್ ಮುಗಿಸಿ ಆರು ತಿಂಗಳು ಕಳೆದಿದ್ದರೂ ಯಾವುದೇ ಉದ್ಯೋಗ ಸಿಗದ ಪದವೀಧರರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಿಗುವ ಭತ್ಯೆ ಎಷ್ಟು.?
ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ:
ಪ್ರತಿ ತಿಂಗಳು ರೂ. 3,000/-
ಡಿಪ್ಲೋಮಾ ಉತ್ತೀರ್ಣರಾದ ಅಭ್ಯರ್ಥಿಗಳಿಗೆ:
ಪ್ರತಿ ತಿಂಗಳು ರೂ. 1,500/- (ಈ ಭತ್ಯೆಯನ್ನು ಗರಿಷ್ಠ ಎರಡು ವರ್ಷಗಳ ಅವಧಿಗೆ ನೀಡಲಾಗುತ್ತದೆ).
ಇನ್ನೂ ಯೋಜನೆಗೆ ನೋಂದಾಯಿಸಿಕೊಳ್ಳದ ಅರ್ಹ ನಿರುದ್ಯೋಗಿ ಯುವಜನರು ತಕ್ಷಣವೇ ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈಗಾಗಲೇ ನೋಂದಾಯಿಸಿಕೊಂಡಿರುವವರು ಪ್ರತಿ ತಿಂಗಳು ತಪ್ಪದೇ ತಮ್ಮ ಸ್ವಯಂ ಘೋಷಣೆಯನ್ನು ಅಪ್‌ಡೇಟ್ ಮಾಡಿಕೊಳ್ಳಲು ಕೋರಲಾಗಿದೆ.


