ಅಮರಾವತಿ:
ಬಡ ಹಾಗೂ ಅಸಹಾಯಕ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ನವಜಾತ ಶಿಶುಗಳನ್ನು ಅಪಹರಿಸಿ ಮತ್ತು ಖರೀದಿಸಿ ಮಾರಾಟ ಮಾಡುತ್ತಿದ್ದ ಆತಂಕಕಾರಿ ಅಂತರರಾಜ್ಯ ಮಕ್ಕಳ ಕಳ್ಳಸಾಗಣೆ ಜಾಲವೊಂದನ್ನು ಆಂಧ್ರಪ್ರದೇಶದ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಜಾಲವು ಅತ್ಯಂತ ವ್ಯವಸ್ಥಿತವಾದ ನೆಟ್‌ವರ್ಕ್ ಹೊಂದಿದ್ದು, ಆಂಧ್ರಪ್ರದೇಶ ಮಾತ್ರವಲ್ಲದೆ ಗುಜರಾತ್, ಮಹಾರಾಷ್ಟ್ರ, ದೆಹಲಿ ಮತ್ತು ತೆಲಂಗಾಣದಂತಹ ದೇಶದ ಪ್ರಮುಖ ರಾಜ್ಯಗಳಿಗೂ ತನ್ನ ಕರಾಳ ಹಸ್ತವನ್ನು ಚಾಚಿದೆ.
ಐವಿಎಫ್ ಸುಳ್ಳು ಹೇಳಿ ಸಿಕ್ಕಿಬಿದ್ದ ದಂಪತಿ:
ಇತ್ತೀಚೆಗೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಈ ಬೃಹತ್ ದಂಧೆ ಬೆಳಕಿಗೆ ಬಂದಿದೆ. ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗದ ಕಾರಣ ಸಮಾಜ ಹಾಗೂ ಕುಟುಂಬದವರಿಂದ ತೀವ್ರ ಅವಮಾನ ಮತ್ತು ಮಾನಸಿಕ ಒತ್ತಡ ಎದುರಿಸುತ್ತಿದ್ದ ದಂಪತಿಯೊಬ್ಬರು ಈ ದಂಧೆಯ ಬಲೆಗೆ ಬಿದ್ದಿದ್ದರು. ಮಗು ಪಡೆಯಲು ಹಲವು ಬಾರಿ ಪ್ರಯತ್ನಿಸಿ ವಿಫಲರಾಗಿದ್ದ ಈ ದಂಪತಿ, ಕೃಷ್ಣಾ ಜಿಲ್ಲೆಯ 'ಫರ್ಹೀನಾ' ಎಂಬ ಮಹಿಳೆಯನ್ನು ಸಂಪರ್ಕಿಸಿದ್ದರು.
ಮಕ್ಕಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುವ ಗ್ಯಾಂಗ್‌ನ ಸಕ್ರಿಯ ಸದಸ್ಯೆಯಾಗಿದ್ದ ಫರ್ಹೀನಾ ಮೂಲಕ ದಂಪತಿ ಮಗುವೊಂದನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ್ದರು. ತಾವು ಈ ಮಗುವನ್ನು ಐವಿಎಫ್ (IVF) ಚಿಕಿತ್ಸೆಯ ಮೂಲಕವೇ ಪಡೆದಿದ್ದೇವೆ ಎಂದು ಊರಿನಲ್ಲಿ ಸುಳ್ಳು ಕಥೆ ಕಟ್ಟಿ ನಂಬಿಸಲು ಯತ್ನಿಸಿದ್ದರು. ಆದರೆ ಪೊಲೀಸರ ತನಿಖೆಯ ವೇಳೆ ಈ ದಂಪತಿಯ ನಾಟಕ ಬಯಲಾಗಿದ್ದು, ಇಡೀ ದಂಧೆಯ ರಹಸ್ಯ ಜಗಜ್ಜಾಹೀರಾಗಿದೆ.
ಬಡತನವೇ ದಂಧೆಕೋರರಿಗೆ ಬಂಡವಾಳ:
ಈ ಜಾಲದ ಅಪರಾಧಿಗಳು ಹೆಣ್ಣುಮಕ್ಕಳು ಹಾಗೂ ಬಡ ಕುಟುಂಬಗಳ ಆರ್ಥಿಕ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಾರೆ. ಬಡ ಪೋಷಕರಿಗೆ ಹಣದ ಆಮಿಷ ಒಡ್ಡಿ ಮಕ್ಕಳನ್ನು ಖರೀದಿಸುವುದು ಅಥವಾ ನವಜಾತ ಶಿಶುಗಳನ್ನು ಅಪಹರಿಸಿ, ಬೇರೆ ರಾಜ್ಯಗಳ ಶ್ರೀಮಂತ ದಂಪತಿಗಳಿಗೆ ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡುವುದು ಈ ಗ್ಯಾಂಗ್‌ನ ಮುಖ್ಯ ಕಾಯಕವಾಗಿದೆ.
ಸದ್ಯ ಕೃಷ್ಣಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (SP) ವಿ. ವಿದ್ಯಾ ಸಾಗರ್ ನಾಯ್ಡು ಅವರ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಿದ್ದು, ಈ ಜಾಲದ ಹಿಂದಿರುವ ಇತರ ಪ್ರಮುಖ ಅಪರಾಧಿಗಳು ಮತ್ತು ಕಿಂಗ್‌ಪಿನ್‌ಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.


