"ನ ಗುರು ಅಧಿಕಂ ತತ್ತ್ವಂ ನ ಗುರು ಅಧಿಕಂ ತಪಃ"
ಗುರು ಎನ್ನುವುದು ಕೇವಲ ಒಂದು ವೃತ್ತಿಯಲ್ಲ, ಅದೊಂದು ಮಹೋನ್ನತ ಸಂಸ್ಕಾರ ಎಂಬುದನ್ನು ಜಗತ್ತಿಗೆ ಸಾರಿದ ಶ್ಲೋಕವಿದು. ಈ ನಾಣ್ಣುಡಿಗೆ ಅನ್ವರ್ಥ ನಾಮದಂತೆ ಬದುಕಿ, 'ಗುರುತ್ವ'ದ ಉದಾತ್ತ ಗುಣಗಳನ್ನು ತಮ್ಮ ನಿತ್ಯಜೀವನದಲ್ಲಿ ಸಾಕಾರಗೊಳಿಸಿದ ಅಪರೂಪದ ಶೈಕ್ಷಣಿಕ ಚೇತನ ಶ್ರೀ ಬೇಬಿ ಕೆ. ಈಶ್ವರಮಂಗಲ ಅವರು.
ಕಾರ್ಕಳ ಮತ್ತು ಶಿರ್ಲಾಲಿನ ಶೈಕ್ಷಣಿಕ ಇತಿಹಾಸದಲ್ಲಿ ತಮ್ಮದೇ ಆದ ಅಳಿಸದ ಮುದ್ರೆ ಒತ್ತಿದ ಇವರು, ಸಹಸ್ರಾರು ವಿದ್ಯಾರ್ಥಿಗಳ ಬಾಳಿಗೆ ಜ್ಞಾನದ ದೀವಿಗೆಯಾದವರು.
ಈಶ್ವರ ಮಂಗಲ, ಮಣ್ಣಿನಿಂದ ಜ್ಞಾನದ ಉತ್ತುಂಗಕ್ಕೆ..
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ 'ಈಶ್ವರ ಮಂಗಲ' ಎಂಬ ಪುಣ್ಯಭೂಮಿಯಲ್ಲಿ ಶ್ರೀಮತಿ ದೇಯಿ ಹಾಗೂ ಶ್ರೀ ಕೊಗ್ಗ ಮಡಿವಾಳ ದಂಪತಿಗಳ ನಾಲ್ಕನೇ ಪುತ್ರನಾಗಿ ಜನಿಸಿದ ಶ್ರೀ ಬೇಬಿ ಕೆ. ಈಶ್ವರ ಮಂಗಲ ಅವರು ಗ್ರಾಮೀಣ ಪರಿಸರದಲ್ಲೇ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿದರು.
ಮುಂದೆ ಪುತ್ತೂರಿನ ಹೆಮ್ಮೆಯ ವಿದ್ಯಾಕೇಂದ್ರವಾದ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಮುಗಿಸುವ ಹೊತ್ತಿಗೆ, ತಮ್ಮ ಅಪ್ರತಿಮ ಪ್ರತಿಭೆ ಮತ್ತು ಶಿಸ್ತಿನಿಂದ ಕಾಲೇಜಿನ ಅತ್ಯುನ್ನತ 'ಅತ್ಯುತ್ತಮ ವಿದ್ಯಾರ್ಥಿ' (Best Out-going Student) ಗೌರವಕ್ಕೆ ಪಾತ್ರರಾದರು. ಜ್ಞಾನದ ಹಸಿವು ಇಷ್ಟಕ್ಕೇ ನಿಲ್ಲಲಿಲ್ಲ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ (ಎಂ.ಎ.) ಪದವಿಯನ್ನು 'ಬಂಗಾರದ ಪದಕ'ದೊಂದಿಗೆ (Gold Medal) ಉತ್ತೀರ್ಣರಾಗಿ ಸಾಧನೆಯ ಶಿಖರವೇರಿದರು.
ಮೂರು ದಶಕಗಳ ಕಾಲ ನಡೆದ ಅನನ್ಯ 'ಅಕ್ಷರ ರಥಯಾತ್ರೆ:
1993ರಲ್ಲಿ ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ (KPSC) ಮೂಲಕ ನೇರ ಉಪನ್ಯಾಸಕರಾಗಿ ಆಯ್ಕೆಯಾಗುವುದರೊಂದಿಗೆ ಇವರ ವೃತ್ತಿಜೀವನದ ಸುವರ್ಣ ಅಧ್ಯಾಯ ಆರಂಭವಾಯಿತು. ಇವರು ತಮ್ಮ ಸುದೀರ್ಘ ಸೇವೆಯನ್ನು ಧಾರೆ ಎರೆದದ್ದು ಕಾರ್ಕಳದ ಪುಣ್ಯಭೂಮಿಯಲ್ಲಿ.
ಕಾರ್ಕಳದ ಹೆಮ್ಮೆಯ ಜ್ಞಾನದಾತ:
ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಬರೋಬ್ಬರಿ ೨೪ ವರ್ಷ ೧೧ ತಿಂಗಳುಗಳ ಕಾಲ ಸುದೀರ್ಘ, ನಿರಂತರ ಮತ್ತು ನಿಷ್ಠಾವಂತ ಸೇವೆ ಸಲ್ಲಿಸಿದರು. ತಲೆಮಾರುಗಳ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಸವಿಯುಣಿಸಿ, ಭಾಷಾಭಿಮಾನವನ್ನು ಬಿತ್ತಿದರು.
ಪ್ರಾಂಶುಪಾಲರಾಗಿ ಪದೋನ್ನತಿ:
ಇವರ ದಕ್ಷತೆ, ಪ್ರಾಮಾಣಿಕತೆ ಮತ್ತು ಆಡಳಿತಾತ್ಮಕ ಚಾಕಚಕ್ಯತೆಯನ್ನು ಗುರುತಿಸಿ ಇಲಾಖೆಯು ಪ್ರಾಂಶುಪಾಲರಾಗಿ ಬಡ್ತಿ ನೀಡಿತು. ಶಿರ್ಲಾಲಿನ 'ನಾಲ್ಕೂರು ನರಸಿಂಗರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜಿನ' ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಇವರು, ಸಂಸ್ಥೆಯನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದರು.
ಶೈಕ್ಷಣಿಕ ಹಾಗೂ ಸಾಹಿತ್ಯಿಕ ಕೊಡುಗೆಗಳು:
ಶಿಕ್ಷಣ ಇಲಾಖೆಯ ಅನೇಕ ಕಾರ್ಯಾಗಾರಗಳಲ್ಲಿ ಪ್ರಬುದ್ಧ ಸಂಪನ್ಮೂಲ ವ್ಯಕ್ತಿಯಾಗಿ (Resource Person) ಮಾರ್ಗದರ್ಶನ ನೀಡಿದ್ದಾರೆ.ಪದವಿಪೂರ್ವ ಶಿಕ್ಷಣ ಇಲಾಖೆಯ ಪಠ್ಯಪುಸ್ತಕ ಸಮಿತಿಯ ಗೌರವಾನ್ವಿತ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಭಾರತ ಸರಕಾರದ ಮಹಾಜನಗಣತಿ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ, ಕಾರ್ಕಳ ತಾಲೂಕಿನ 'ಮಾಸ್ಟರ್ ಟ್ರೈನರ್' ಆಗಿ ಇಲಾಖೆಯಿಂದ ಪ್ರಶಂಸಿಸಲ್ಪಟ್ಟಿದ್ದಾರೆ. ಕೇವಲ ಶೈಕ್ಷಣಿಕ ಕ್ಷೇತ್ರ ಮಾತ್ರವಲ್ಲದೆ, ಸಾಹಿತ್ಯಿಕ ವಲಯದಲ್ಲೂ ಸಕ್ರಿಯರಾಗಿದ್ದ ಇವರು, ಪ್ರಸಿದ್ಧ 'ಕಾರ್ಕಳ ಸಾಹಿತ್ಯ ಸಂಘ'ದಲ್ಲಿ ಸುದೀರ್ಘ ೨೦ ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ.
ಸುಸಂಸ್ಕೃತ ಹಾಗೂ ಸಾಧಕರ ಸುಂದರ ಸಂಸಾರ:
ವೃತ್ತಿ ಜೀವನದಲ್ಲಿ ಎಷ್ಟು ಯಶಸ್ವಿಯೋ, ಅಷ್ಟೇ ಆದರ್ಶಪ್ರಾಯವಾದ ಗೃಹಸ್ಥ ಜೀವನ ಇವರದ್ದು. ಇವರ ಯಶಸ್ಸಿನ ಹಿಂದೆ ಸದಾ ನೆರಳಾಗಿ ನಿಂತವರು ಪತ್ನಿ ಶ್ರೀಮತಿ ಸವಿತಾ ಅವರು.ತಮ್ಮ ಮಕ್ಕಳನ್ನು ಅತ್ಯುತ್ತಮ ಸಂಸ್ಕಾರದೊಂದಿಗೆ ಸಮಾಜದ ಉನ್ನತ ಸಾಧಕರನ್ನಾಗಿ ಬೆಳೆಸಿದ್ದಾರೆ:
ಹಿರಿಯ ಮಗಳು ವಿಜೇತಾ:
ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿ, ಕಂಪ್ಯೂಟರ್ ಸೈನ್ಸ್ ಹಾಗೂ ಐಟಿ (ಮಾಹಿತಿ ತಂತ್ರಜ್ಞಾನ) ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನ ಕಂಡುಕೊಂಡಿದ್ದಾರೆ.
ಕಿರಿಯ ಮಗಳು ವೀಕ್ಷಿತಾ :
ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು,ಆಯುರ್ವೇದ ವೈದ್ಯಕೀಯ ಕ್ಷೇತ್ರದತ್ತ, ಅವರ ಸೇವೆ ಮೀಸಲಾಗಿದೆ
ಆತ್ಮಸಾಕ್ಷಿಯೇ ಮಹಾ ಪ್ರಶಸ್ತಿ:
"ಉಂಡ ಅನ್ನ ಚೆನ್ನಾಗಿ ಪಚನವಾಗುವುದು, ಮಲಗಿದಾಗ ನೆಮ್ಮದಿಯ ನಿದ್ದೆ ಬರುವುದು - ಇವೇ ನಿಜವಾದ ಆರೋಗ್ಯ ಮತ್ತು ಮನಶ್ಶಾಂತಿಯ ಲಕ್ಷಣಗಳು. ಈ ಜಗತ್ತಿನಲ್ಲಿ ಬಾಹ್ಯವಾಗಿ ಸಿಗುವ ಎಲ್ಲ ಪ್ರಶಸ್ತಿ-ಪುರಸ್ಕಾರಗಳಿಗಿಂತ ದೊಡ್ಡದಾದ ಪ್ರಶಸ್ತಿ ಎಂದರೆ, ಅದು ತನ್ನ ಕರ್ತವ್ಯವನ್ನು ಮನಶ್ಶಾಂತಿಗೆ ಮತ್ತು ಆತ್ಮಸಾಕ್ಷಿಗೆ ಒಪ್ಪುವಂತೆ ಪ್ರಾಮಾಣಿಕವಾಗಿ ಮಾಡುವುದು. ಇದೇ ತತ್ವವನ್ನು ಉಸಿರಾಗಿಸಿಕೊಂಡು ಬದುಕಿದವರು
ಶ್ರೀ ಬೇಬಿ ಕೆ. ಈಶ್ವರಮಂಗಲ.
ತಮ್ಮ ಮೂರು ದಶಕಗಳ ಶೈಕ್ಷಣಿಕ ಪಯಣದಲ್ಲಿ ಸರಕಾರಿ ವಿದ್ಯಾಸಂಸ್ಥೆಗಳಿಗೆ ಹೊಸ ಕಾಯಕಲ್ಪ ನೀಡುತ್ತಾ, ಸಹಸ್ರಾರು ವಿದ್ಯಾರ್ಥಿಗಳ ಬದುಕನ್ನು ಉಜ್ವಲಗೊಳಿಸಿದ ಈ ಆದರ್ಶ ಗುರುವಿನ ಮುಂದಿನ ನಿವೃತ್ತ ಜೀವನವು ಸುಖ, ಶಾಂತಿ, ಆರೋಗ್ಯ ಹಾಗೂ ನೆಮ್ಮದಿಯಿಂದ ಕೂಡಿರಲಿ ಎಂಬುದೇ ಸಾಹಿತ್ಯಾಭಿಮಾನಿಗಳ ಮತ್ತು ವಿದ್ಯಾರ್ಥಿ ವೃಂದದ ಹೃತ್ಪೂರ್ವಕ ಪ್ರಾರ್ಥನೆ ಹಾಗೂ ಶುಭ ಹಾರೈಕೆಗಳು.


