Public Prime News

CLEAR VISION, TRUE MISSION

ಅಜೆಕಾರು: ನಡೆದುಕೊಂಡು ಹೋಗುತ್ತಿದ್ದ ಪಿಯುಸಿ ವಿದ್ಯಾರ್ಥಿನಿಗೆ ಕಿರುಕುಳ; ಆರೋಪಿ ಪೊಲೀಸ್ ವಶಕ್ಕೆ.
crime

ಅಜೆಕಾರು: ನಡೆದುಕೊಂಡು ಹೋಗುತ್ತಿದ್ದ ಪಿಯುಸಿ ವಿದ್ಯಾರ್ಥಿನಿಗೆ ಕಿರುಕುಳ; ಆರೋಪಿ ಪೊಲೀಸ್ ವಶಕ್ಕೆ.

Public Prime News

Public Prime News

Reported by Public Prime News

ಅಜೆಕಾರು: 

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಗೆ ಬೈಕ್‌ನಲ್ಲಿ ಡ್ರಾಪ್ ನೀಡುವುದಾಗಿ ಪುಸಲಾಯಿಸಿ, ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ವಿವಾಹಿತ ವ್ಯಕ್ತಿಯೊಬ್ಬನನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶಿರ್ಲಾಲು ಹಾಡಿಯಂಗಡಿ ಶಿವಬೆಟ್ಟು ನಿವಾಸಿ, ಖಾಸಗಿ ಬಸ್ ಚಾಲಕ ಪ್ರಶಾಂತ್ ನಾಯಕ್ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.


ಘಟನೆಯ ವಿವರ:

ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ ಕಾಲೇಜು ಮುಗಿಸಿ ನಡೆದುಕೊಂಡು ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಅಜೆಕಾರು ಕುರ್ಸುಕಟ್ಟೆ ಎಂಬಲ್ಲಿಗೆ ತಲುಪಿದಾಗ, ಅಜೆಕಾರು ಪೇಟೆ ಕಡೆಯಿಂದ ಬೈಕ್‌ನಲ್ಲಿ ಬಂದ ಪ್ರಶಾಂತ್ ನಾಯಕ್ ಬಾಲಕಿಯನ್ನು ತಡೆದಿದ್ದಾನೆ. "ನಿನ್ನ ಮನೆಯವರು ನನಗೆ ಪರಿಚಯವಿದ್ದಾರೆ, ಮನೆಗೆ ಡ್ರಾಪ್ ಕೊಡುತ್ತೇನೆ" ಎಂದು ನಂಬಿಸಿ ಆಕೆಯನ್ನು ಬೈಕ್‌ನಲ್ಲಿ ಕುಳ್ಳಿರಿಸಿಕೊಂಡಿದ್ದಾನೆ.


ಪ್ರಯಾಣದ ಮಧ್ಯೆ ಆರೋಪಿಯು ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ. ಇದರಿಂದ ತೀವ್ರವಾಗಿ ಹೆದರಿದ ಬಾಲಕಿ, ಆತನಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ಬೈಕಿನಿಂದಲೇ ಕೆಳಗೆ ಜಿಗಿದಿದ್ದಾಳೆ. ಪರಿಣಾಮವಾಗಿ ಆಕೆಗೆ ಗಾಯಗಳಾಗಿವೆ.


ಪೊಲೀಸ್ ಕಾರ್ಯಾಚರಣೆ ಮತ್ತು ಬಂಧನ:

ಬಾಲಕಿ ಬೈಕಿನಿಂದ ಕೆಳಗೆ ಬೀಳುತ್ತಿದ್ದಂತೆ ಆರೋಪಿ ಪ್ರಶಾಂತ್ ನಾಯಕ್ ಸ್ಥಳದಿಂದ ತಕ್ಷಣವೇ ಪರಾರಿಯಾಗಿದ್ದನು. ಈ ಕುರಿತು ಬಾಲಕಿಯ ಪೋಷಕರು ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಮೊಬೈಲ್ ಕರೆಗಳ ನೆಟ್‌ವರ್ಕ್ ಆಧರಿಸಿ ತನಿಖೆ ನಡೆಸಿ, ಕೊನೆಗೂ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಸ್ಥಳೀಯರ ಮಾಹಿತಿಯ ಪ್ರಕಾರ, ವಿವಾಹಿತನಾಗಿರುವ ಆರೋಪಿ ಪ್ರಶಾಂತ್ ತೀವ್ರ ಕುಡಿತದ ಚಟಕ್ಕೆ ದಾಸನಾಗಿದ್ದ ಎನ್ನಲಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share this story