Public Prime News

CLEAR VISION, TRUE MISSION

"ಏನೇ ಇದ್ದರೂ ನಾಳೆ ಮಾತನಾಡುತ್ತೇನೆ" ಎಂದ ಸಿಎಂ ಸಿದ್ದರಾಮಯ್ಯ; ತೀವ್ರ ಕುತೂಹಲ ಮೂಡಿಸಿದ ಮುಖ್ಯಮಂತ್ರಿಗಳ ನಡೆ..!
politics

"ಏನೇ ಇದ್ದರೂ ನಾಳೆ ಮಾತನಾಡುತ್ತೇನೆ" ಎಂದ ಸಿಎಂ ಸಿದ್ದರಾಮಯ್ಯ; ತೀವ್ರ ಕುತೂಹಲ ಮೂಡಿಸಿದ ಮುಖ್ಯಮಂತ್ರಿಗಳ ನಡೆ..!

Public Prime News

Public Prime News

Reported by Public Prime News

ಬೆಂಗಳೂರು:

ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಹಾಗೂ ಹೈಕಮಾಂಡ್ ನಿರ್ಧಾರಗಳ ಕುರಿತು ಭಾರಿ ಚರ್ಚೆಗಳು ಮತ್ತು ವದಂತಿಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಪ್ರಶ್ನೆಗಳಿಗೆ "ನಾಳೆ ಉತ್ತರ ನೀಡುತ್ತೇನೆ" ಎಂದು ಹೇಳುವ ಮೂಲಕ ತೀವ್ರ ಕುತೂಹಲ ಮೂಡಿಸಿದ್ದಾರೆ.


ನೆಹರು ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗಿ: 

ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುಣ್ಯತಿಥಿಯ ಅಂಗವಾಗಿ ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರು, ನೆಹರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನೆಹರು ಅವರು ದೇಶಕ್ಕೆ ನೀಡಿದ ಅಪಾರ ಕೊಡುಗೆಗಳನ್ನು ಮುಕ್ತಕಂಠದಿಂದ ಕೊಂಡಾಡಿದರು.


ಮಾಧ್ಯಮಗಳ ಪ್ರಶ್ನೆಗೆ ಸಿಎಂ ಮೌನ:

ನೆಹರು ಅವರ ಕುರಿತು ಮಾತನಾಡಿದ ಬೆನ್ನಲ್ಲೇ, ಮಾಧ್ಯಮ ಪ್ರತಿನಿಧಿಗಳು ರಾಜ್ಯ ರಾಜಕೀಯದ ಪ್ರಸಕ್ತ ವಿದ್ಯಮಾನಗಳು, ಸಿಎಂ ಬದಲಾವಣೆಯ ಚರ್ಚೆಗಳು ಹಾಗೂ ಅವರ ಇತ್ತೀಚಿನ ದೆಹಲಿ ಪ್ರವಾಸದ ಕುರಿತು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು. ಆದರೆ, ಈ ಯಾವುದೇ ರಾಜಕೀಯ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ನೇರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.


ರಾಜಕೀಯ ಬೆಳವಣಿಗೆಗಳ ಕುರಿತು ಪಟ್ಟುಬಿಡದೆ ಕೇಳಿದ ಪ್ರಶ್ನೆಗಳಿಗೆ, “ನಾಳೆ ಮಾತನಾಡುತ್ತೇನೆ, ಏನೇ ಇದ್ದರೂ ನಾಳೆಯೇ ಮಾತನಾಡುತ್ತೇನೆ” ಎಂದು ಕೇವಲ ಒಂದೇ ಸಾಲಿನಲ್ಲಿ ಉತ್ತರಿಸಿ ಸಿದ್ದರಾಮಯ್ಯ ಅವರು ಅಲ್ಲಿಂದ ಹೊರಟುಹೋದರು.


ಬೇಸರದಲ್ಲಿದ್ದರಾ ಮುಖ್ಯಮಂತ್ರಿಗಳು.?

ಸಾಧಾರಣವಾಗಿ ಸಿದ್ದರಾಮಯ್ಯನವರು ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಬಹಳ ಗಟ್ಟಿಯಾಗಿ ಮತ್ತು ಧೈರ್ಯವಾಗಿ ಮಾತನಾಡುತ್ತಾರೆ. ಪತ್ರಕರ್ತರು ಅಡ್ಡ ಪ್ರಶ್ನೆಗಳನ್ನು ಹಾಕಿದರೆ, ತಮ್ಮದೇ ಶೈಲಿಯಲ್ಲಿ ಮರು ಪ್ರಶ್ನೆ ಹಾಕಿ ಉತ್ತರಿಸುವುದು ಅವರ ವಾಡಿಕೆ. ಆದರೆ, ಇಂದು ಮಾಧ್ಯಮಗಳ ಎದುರು ಮಾತನಾಡುವಾಗ ಸಿದ್ದರಾಮಯ್ಯ ಅವರು ತೀವ್ರ ಬೇಸರದಲ್ಲಿದ್ದಾರೆ ಎಂಬುದು ಅವರ ಮುಖಭಾವ ಹಾಗೂ ನಡವಳಿಕೆಯಿಂದ ಸ್ಪಷ್ಟವಾಗಿ ಎದ್ದು ಕಾಣಿಸುತ್ತಿತ್ತು.


ನಾಳೆ ಮಹತ್ವದ ಬೆಳವಣಿಗೆ ಸಾಧ್ಯತೆ – ರಾಜೀನಾಮೆ ವದಂತಿ.? 

ಮೂಲಗಳ ಪ್ರಕಾರ, ಸಿದ್ದರಾಮಯ್ಯನವರು ನಾಳೆ ಬೆಳಗ್ಗೆ ತಮ್ಮ ಆಪ್ತ ಸಚಿವರು ಮತ್ತು ಶಾಸಕರ ಜೊತೆಗೆ ಮಹತ್ವದ ಬ್ರೇಕ್‌ಫಾಸ್ಟ್‌ (ಉಪಾಹಾರ) ಸಭೆಯನ್ನು ನಡೆಸಲಿದ್ದಾರೆ. ಈ ಸಭೆಯ ಮುಕ್ತಾಯದ ಬೆನ್ನಲ್ಲೇ ಅವರು ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ರಾಜೀನಾಮೆ ನೀಡಿದ ನಂತರ ಅಧಿಕೃತ ಸುದ್ದಿಗೋಷ್ಠಿಯನ್ನು ನಡೆಸಿ, ಸದ್ಯ ಎದ್ದಿರುವ ಎಲ್ಲಾ ರಾಜಕೀಯ ಪ್ರಶ್ನೆಗಳು ಮತ್ತು ಗೊಂದಲಗಳಿಗೆ ಅವರು ಸಂಪೂರ್ಣ ಉತ್ತರ ನೀಡಲಿದ್ದಾರೆ ಎಂದು ವರದಿಯಾಗಿದೆ.



Share this story