ಬೆಂಗಳೂರು:
ವಿವಿಐಪಿ ಸಂಸ್ಕೃತಿಗೆ ಬ್ರೇಕ್ ಹಾಕಿ, ಸಾಮಾನ್ಯ ಜನರಂತೆ ಸಾರ್ವಜನಿಕ ಸಾರಿಗೆ ಬಳಸಿ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಕ್ಷಣವೇ ಸ್ಪಂದಿಸಿದ್ದಾರೆ. ಕುಂಬಳಗೋಡಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪಕ್ಷದ ಪ್ರಮುಖ ಕಾರ್ಯಾಗಾರದಲ್ಲಿ ಭಾಗವಹಿಸಲು ಅವರು ತಮ್ಮ ಐಷಾರಾಮಿ ಕಾರು ಹಾಗೂ ಬೆಂಗಾವಲು ವಾಹನಗಳ ಪಡೆಯನ್ನು ಬದಿಗೊತ್ತಿ, ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಗಮನ ಸೆಳೆದಿದ್ದಾರೆ.
ಟ್ರಾಫಿಕ್ ಕಿರಿಕಿರಿಗೂ ಮುಕ್ತಿ, ಕಾರ್ಯಕರ್ತರಿಗೂ ಸಂದೇಶ
ಬೆಂಗಳೂರಿನ ಭೀಕರ ಟ್ರಾಫಿಕ್ ಸಮಸ್ಯೆಯ ನಡುವೆ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ತಲುಪಲು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ತಡೆಯಲು ವಿಜಯೇಂದ್ರ ಅವರು ಮೆಟ್ರೋ ಪ್ರಯಾಣದ ಹಾದಿ ತುಳಿದರು. ರಾಜಧಾನಿಯ ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸಲು ಮೆಟ್ರೋ ಅತ್ಯುತ್ತಮ ಮಾರ್ಗ ಎಂಬ ಸಂದೇಶ ಸಾರಿದ ಅವರು, ಸಾಮಾನ್ಯ ಪ್ರಯಾಣಿಕರಂತೆ ಟಿಕೆಟ್ ಪಡೆದು ರೈಲು ಹತ್ತಿದರು.
ಮೆಟ್ರೋದಲ್ಲಿ ಸರ್ಪ್ರೈಸ್ ಆದ ಪ್ರಯಾಣಿಕರು!
ಬಿಜೆಪಿ ರಾಜ್ಯಾಧ್ಯಕ್ಷರು ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಸಡನ್ ಆಗಿ ಮೆಟ್ರೋ ರೈಲಿನಲ್ಲಿ ಪ್ರತ್ಯಕ್ಷವಾಗಿದ್ದನ್ನು ಕಂಡು ಸಹ-ಪ್ರಯಾಣಿಕರು ಹಾಗೂ ಮೆಟ್ರೋ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಆಶ್ಚರ್ಯಚಕಿತರಾದರು. ಪ್ರಯಾಣದ ಅವಧಿಯಲ್ಲಿ ವಿಜಯೇಂದ್ರ ಅವರು ತಮ್ಮ ಪಕ್ಕದಲ್ಲಿದ್ದ ಸಾಮಾನ್ಯ ಜನರೊಂದಿಗೆ ಕುಶಲೋಪರಿ ವಿಚಾರಿಸಿ, ಅತ್ಯಂತ ಸರಳವಾಗಿ ಸಂವಾದ ನಡೆಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಪ್ರಯಾಣದ ಫೋಟೋ ಹಾಗೂ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.


