ಸೂರತ್:
ಆನ್‌ಲೈನ್ ಗೇಮ್‌ಗಳ ವ್ಯಸನ ಅಪ್ರಾಪ್ತ ಮಕ್ಕಳನ್ನು ಎಷ್ಟು ಹಠಮಾರಿಗಳನ್ನಾಗಿ ಮಾಡುತ್ತಿದೆ ಎಂಬುದಕ್ಕೆ ಗುಜರಾತ್‌ನ ಸೂರತ್‌ನಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. ಮೊಬೈಲ್‌ನಲ್ಲಿ ‘ಫ್ರೀ ಫೈರ್’ ಆಡದಂತೆ ತಂದೆ ತಡೆದಿದ್ದಕ್ಕೆ ಮುನಿಸಿಕೊಂಡ ಒಂದೇ ಕುಟುಂಬದ ಮೂವರು ಅಪ್ರಾಪ್ತ ಮಕ್ಕಳು ಮನೆಯಿಂದ 15 ಸಾವಿರ ರೂ. ನಗದಿನೊಂದಿಗೆ ಓಡಿಹೋಗಿದ್ದಾರೆ.
ನಡೆದಿದ್ದೇನು.?
14, 11 ಮತ್ತು 9 ವರ್ಷದ ಈ ಮೂವರು ಮಕ್ಕಳು ತಂದೆಯ ಮೊಬೈಲ್‌ನಲ್ಲಿ ದಿನವಿಡೀ ಗೇಮ್ ಆಡುತ್ತಿದ್ದರು. ಇದರಿಂದ ಬೇಸತ್ತ ತಂದೆ, ಘಟನೆಗೆ ಮೂರು ದಿನಗಳ ಮುನ್ನ ಫೋನ್‌ನಿಂದ ಸಿಮ್ ಕಾರ್ಡ್ ತೆಗೆದು, ಮೊಬೈಲ್ ಲಾಕ್ ಮಾಡಿ ಇಟ್ಟುಕೊಂಡಿದ್ದರು. ಇದರಿಂದ ಕೋಪಗೊಂಡ ಮಕ್ಕಳು, ಮೇ 19ರ ಬೆಳಗಿನ ಜಾವ ಪೋಷಕರು ನಿದ್ದೆಯಲ್ಲಿದ್ದಾಗ ಹಣದೊಂದಿಗೆ ಪರಾರಿಯಾಗಿದ್ದಾರೆ.
ಪೊಲೀಸ್ ತನಿಖೆ:
ಪೋಷಕರ ದೂರಿನ ಮೇರೆಗೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರಿಗೆ ಮಕ್ಕಳು ನಡೆದು ಹೋಗುತ್ತಿರುವುದು ಪತ್ತೆಯಾಗಿದೆ. ಸದ್ಯಕ್ಕೆ ಮಕ್ಕಳು ಸುರಕ್ಷಿತವಾಗಿದ್ದು, ಮುಂಬೈ ಕಡೆಗೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಮಕ್ಕಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.


