Public Prime News

CLEAR VISION, TRUE MISSION

BREAKING: ಹೊಸ ಶೈಕ್ಷಣಿಕ ವರ್ಷಕ್ಕೆ 51,000 ಅತಿಥಿ ಶಿಕ್ಷಕರ ನೇಮಕಕ್ಕೆ ಗ್ರೀನ್ ಸಿಗ್ನಲ್.!
education

BREAKING: ಹೊಸ ಶೈಕ್ಷಣಿಕ ವರ್ಷಕ್ಕೆ 51,000 ಅತಿಥಿ ಶಿಕ್ಷಕರ ನೇಮಕಕ್ಕೆ ಗ್ರೀನ್ ಸಿಗ್ನಲ್.!

Public Prime News

Public Prime News

Reported by Public Prime News

ಬೆಂಗಳೂರು: 

ಹೊಸ ಶೈಕ್ಷಣಿಕ ವರ್ಷದ ಆರಂಭದಿಂದಲೇ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ತಲುಪಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಎದುರಾಗಿರುವ ಬೋಧಕರ ಕೊರತೆಯನ್ನು ನೀಗಿಸುವ ಸಲುವಾಗಿ ಬರೋಬ್ಬರಿ 51,000 ಅತಿಥಿ ಶಿಕ್ಷಕರನ್ನು (Guest Teachers) ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕೃತ ಮಂಜೂರಾತಿ ನೀಡಿದೆ.


ಶೈಕ್ಷಣಿಕ ವರ್ಷದ ಮೊದಲ ದಿನದಿಂದಲೇ ಬೋಧನೆ:

ಮೇ ತಿಂಗಳಿನಲ್ಲೇ ಶಾಲೆಗಳು ಮುಂಚಿತವಾಗಿ ಪುನರಾರಂಭಗೊಳ್ಳುತ್ತಿರುವುದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಪ್ರಸ್ತಾವನೆಯನ್ನು ಪುರಸ್ಕರಿಸಿ ಈ ತುರ್ತು ಆದೇಶ ಹೊರಡಿಸಲಾಗಿದೆ.


 ಆರ್ಥಿಕ ಇಲಾಖೆಯು ಮೇ 20, 2026 ರಂದು ನೀಡಿರುವ ಅಧಿಕೃತ ಸಹಮತಿಯನ್ವಯ (ಟಿಪ್ಪಣಿ ಸಂಖ್ಯೆ: ಆಇ 371 ವೆಚ್ಚ-8/2026), ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ (ಪ್ರೌಢ) ಎಸ್.ಪ್ರಕಾಶ ಅವರು ರಾಜ್ಯಪಾಲರ ಆಜ್ಞಾನುಸಾರ ಈ ಮಹತ್ವದ ಆದೇಶವನ್ನು ಪ್ರಕಟಿಸಿದ್ದಾರೆ.


ಯಾವ ಶಾಲೆಗೆ ಎಷ್ಟು ಶಿಕ್ಷಕರ ನೇಮಕ.?

ಸರ್ಕಾರದ ಆದೇಶ ಸಂಖ್ಯೆ ಇಪಿ 160 ಎಸ್‌ಇಎಸ್ 2026 ರ ಪ್ರಕಾರ ಅನುಮೋದನೆ ಪಡೆದಿರುವ ಅತಿಥಿ ಶಿಕ್ಷಕರ ವರ್ಗಾವಾರು ವಿವರ ಹೀಗಿದೆ


  • ಸರ್ಕಾರಿ ಪ್ರಾಥಮಿಕ ಶಾಲೆಗಳು: 40,000 ಹುದ್ದೆಗಳು

  • ಸರ್ಕಾರಿ ಪ್ರೌಢಶಾಲೆಗಳು: 11,000 ಹುದ್ದೆಗಳು

  • ಒಟ್ಟು ಒಪ್ಪಿಗೆ ನೀಡಲಾದ ಹುದ್ದೆಗಳು: 51,000


ತಾತ್ಕಾಲಿಕ ನೇಮಕಾತಿ ವ್ಯವಸ್ಥೆ: 

ಈ ಅತಿಥಿ ಶಿಕ್ಷಕರ ನೇಮಕಾತಿಯು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಖಾಯಂ ಶಿಕ್ಷಕರನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವವರೆಗೆ ಅಥವಾ ಪ್ರಸ್ತುತ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಮಾತ್ರ ಅನ್ವಯಿಸುತ್ತದೆ. ಇನ್ನು ನೇಮಕಗೊಳ್ಳುವ ಶಿಕ್ಷಕರ ಗೌರವಧನ ಪಾವತಿಗಾಗಿ ಜಿಲ್ಲಾ ಹಾಗೂ ತಾಲೂಕುವಾರು ವಿವರಗಳೊಂದಿಗೆ ಹೊಸ ಪ್ರಸ್ತಾವನೆಯನ್ನು ಸಲ್ಲಿಸಲು ಇಲಾಖೆಗೆ ಸೂಚನೆ ನೀಡಲಾಗಿದೆ.

ನಿರಂತರ ಶಿಕ್ಷಣಕ್ಕೆ ಅನುಕೂಲ: 

ಕಳೆದ 2025-26ನೇ ಸಾಲಿನಲ್ಲೂ ಸರ್ಕಾರವು ಇದೇ ಮಾದರಿಯಲ್ಲಿ 51,000 ಅತಿಥಿ ಶಿಕ್ಷಕರನ್ನು ಒದಗಿಸಿತ್ತು. ಈ ಬಾರಿಯೂ ವರ್ಷದ ಆರಂಭದಲ್ಲೇ ಅತಿಥಿ ಶಿಕ್ಷಕರು ಶಾಲೆಗಳಿಗೆ ಲಭ್ಯವಾಗುವುದರಿಂದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಲಿದೆ. ಇದರಿಂದಾಗಿ ಮಕ್ಕಳಿಗೆ ಗುಣಮಟ್ಟದ ನಿರಂತರ ಬೋಧನೆ ದೊರೆಯಲಿದ್ದು, ಅವರ ಶೈಕ್ಷಣಿಕ ಪ್ರಗತಿಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದು ಇಲಾಖೆಯ ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share this story