ಬೆಂಗಳೂರು:
"ನನಗೆ ರಾಷ್ಟ್ರ ರಾಜಕಾರಣದಲ್ಲಿ ಯಾವುದೇ ಆಸಕ್ತಿ ಇಲ್ಲ. ನಾನು ಕರ್ನಾಟಕದ ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ" ಎಂದು ಸಿದ್ದರಾಮಯ್ಯ ಅವರು ಅತ್ಯಂತ ಸ್ಪಷ್ಟವಾಗಿ ಘೋಷಿಸಿದ್ದಾರೆ.
ಹೈಕಮಾಂಡ್ ಆಫರ್ ನಿರಾಕರಿಸಿದ ಸಿದ್ದು:
ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಅಧಿಕೃತ ರಾಜೀನಾಮೆ ನೀಡಿದ ಬಳಿಕ ಆಯೋಜಿಸಲಾಗಿದ್ದ ವಿಶೇಷ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ಈ ಪ್ರಮುಖ ವಿಷಯವನ್ನು ಹಂಚಿಕೊಂಡಿದ್ದಾರೆ. "ಕಾಂಗ್ರೆಸ್ ಹೈಕಮಾಂಡ್ ನನಗೆ ದೆಹಲಿಗೆ ಬರುವಂತೆ ಹಾಗೂ ರಾಜ್ಯಸಭೆಗೆ ಹೋಗುವಂತೆ ಸೂಚನೆ ನೀಡಿತ್ತು. ಆದರೆ, ನಾನು ಅತ್ಯಂತ ವಿನಮ್ರವಾಗಿಯೇ ಅವರ ಪ್ರಸ್ತಾಪವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದೇನೆ. ನನಗೆ ಕೇಂದ್ರ ಅಥವಾ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಮನಸ್ಸಿಲ್ಲ, ನಾನು ರಾಜ್ಯದಲ್ಲೇ ಉಳಿಯುತ್ತೇನೆ ಎಂದು ಹೈಕಮಾಂಡ್‌ಗೆ ತಿಳಿಸಿದ್ದೇನೆ" ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.
ಇನ್ನೂ ಎರಡು ವರ್ಷ ಜನರ ಪರ ಕೆಲಸ:
"ಕರ್ನಾಟಕದ ಜನತೆ ನನ್ನನ್ನು ಐದು ವರ್ಷಗಳ ಅವಧಿಗೆ ಶಾಸಕನನ್ನಾಗಿ ಆಯ್ಕೆ ಮಾಡಿ ಕಳುಹಿಸಿದ್ದಾರೆ. ನನ್ನ ಶಾಸಕ ಸ್ಥಾನದ ಅವಧಿ ಇನ್ನೂ ಎರಡು ವರ್ಷ ಬಾಕಿ ಇದೆ. ಅಲ್ಲಿಯವರೆಗೆ ನಾನು ಕರ್ನಾಟಕ ರಾಜ್ಯದ ಹಾಗೂ ನನ್ನ ಕ್ಷೇತ್ರದ ಜನರ ಪರವಾಗಿ ನಿರಂತರವಾಗಿ ಕೆಲಸ ಮಾಡುತ್ತೇನೆ" ಎಂದು ಅವರು ತಮ್ಮ ಮುಂದಿನ ನಡೆಯನ್ನು ಸ್ಪಷ್ಟಪಡಿಸಿದರು.
ಮುಂದಿನ ಸಿಎಂ ಯಾರು.?
ಇದೇ ಸಂದರ್ಭದಲ್ಲಿ ಮಾಧ್ಯಮದವರು 'ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಆಗ್ತಾರೆ?' ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ಹಾಗೂ ಪಕ್ಷದ ಹೈಕಮಾಂಡ್ ಒಟ್ಟಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.


