Public Prime News

CLEAR VISION, TRUE MISSION

ಭಟ್ಕಳದಲ್ಲಿ ಮಹಾ ದುರಂತ: ಕಪ್ಪೆಚಿಪ್ಪು ಆರಿಸಲು ಹೋದ ಒಂದೇ ಕುಟುಂಬದ 11 ಮಂದಿ ಜಲಸಮಾಧಿ; ಕಣ್ಣೀರಿನ ಮಡುವಿನಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ..!
kannadanadi

ಭಟ್ಕಳದಲ್ಲಿ ಮಹಾ ದುರಂತ: ಕಪ್ಪೆಚಿಪ್ಪು ಆರಿಸಲು ಹೋದ ಒಂದೇ ಕುಟುಂಬದ 11 ಮಂದಿ ಜಲಸಮಾಧಿ; ಕಣ್ಣೀರಿನ ಮಡುವಿನಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ..!

Public Prime News

Public Prime News

Reported by Public Prime News

ಭಟ್ಕಳ: 

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಸಮೀಪದ ತಟ್ಟೆಹಕ್ಕಲು ನದಿ ಮುಖಜ ಭೂಮಿಯಲ್ಲಿ ಭಾನುವಾರ ಸಂಭವಿಸಿದ ಜಲ ದುರಂತದಲ್ಲಿ ನಾಪತ್ತೆಯಾಗಿದ್ದ ಕೊನೆಯ ವ್ಯಕ್ತಿಯ ಮೃತದೇಹವೂ ಪತ್ತೆಯಾಗುವುದರೊಂದಿಗೆ ಒಟ್ಟು ಮೃತರ ಸಂಖ್ಯೆ 11ಕ್ಕೆ ಏರಿದೆ. ಮೃತರ ಸ್ವಗ್ರಾಮವಾದ ಪಡುಶಿರಾಲಿಯ ಶಾರದಾಹೊಳೆಯಲ್ಲಿ ಜಿಲ್ಲಾಡಳಿತದ ಸಮ್ಮುಖದಲ್ಲಿ ಸೋಮವಾರ ಸಾಮೂಹಿಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.


ಭಾನುವಾರ ಮಧ್ಯಾಹ್ನ ಒಂದೇ ಕುಟುಂಬದ 14 ಸದಸ್ಯರು ಕಪ್ಪೆಚಿಪ್ಪು ಸಂಗ್ರಹಿಸಲು ನದಿಗೆ ಇಳಿದಿದ್ದಾಗ ಮಳೆಯ ನೀರಿನ ಹರಿವು ಮತ್ತು ಸಮುದ್ರದ ತೀವ್ರ ಉಬ್ಬರದಿಂದಾಗಿ ಈ ದುರಂತ ಸಂಭವಿಸಿದೆ. ಮೃತರನ್ನು ಮಾಲತಿ ನಾಯ್ಕ್, ಲಕ್ಷ್ಮಿ ಎಂ. ನಾಯ್ಕ್, ಲಕ್ಷ್ಮಿ ಎಸ್. ನಾಯ್ಕ್, ಲಕ್ಷ್ಮಿ ಎ. ನಾಯ್ಕ್, ಉಮೇಶ್ ನಾಯ್ಕ್, ಜ್ಯೋತಿ ನಾಯ್ಕ್, ಮಾಸ್ತಮ್ಮ ನಾಯ್ಕ್, ಮಂಜಮ್ಮ ನಾಯ್ಕ್ ಮತ್ತು ಇಂದು ಬೆಳಿಗ್ಗೆ ಪತ್ತೆಯಾದ ಮಾದೇವ ಭೈರಪ್ಪ ನಾಯ್ಕ್ (52) ಸೇರಿದಂತೆ 11 ಜನ ಎಂದು ಗುರುತಿಸಲಾಗಿದೆ. ತಾಯಿ ಮಾಸ್ತಮ್ಮ ಅವರನ್ನು ರಕ್ಷಿಸಲು ಹೋದ ಮಗ ಉಮೇಶ್ ಕೂಡ ಮೃತಪಟ್ಟಿದ್ದಾರೆ.


ಘಟನಾ ಸ್ಥಳದಿಂದ ಮೂವರು ಮಹಿಳೆಯರನ್ನು ಸ್ಥಳೀಯರು ರಕ್ಷಿಸಿದ್ದು, ಸದ್ಯ ಅವರು ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ. ಸೋಮವಾರ ಬೆಳಿಗ್ಗೆ ಎನ್‌ಡಿಆರ್‌ಎಫ್ ಮತ್ತು ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ತಂಡ ಕೊನೆಯ ಶವವನ್ನು ಹೊರತೆಗೆದಿದೆ. 


ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ಹಾಗೂ ಕೇಂದ್ರದಿಂದ 2 ಲಕ್ಷ ರೂ.ಗಳ ಪರಿಹಾರ ಧನವನ್ನು ಘೋಷಿಸಲಾಗಿದೆ. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಹನ್ನೊಂದೂ ಮೃತದೇಹಗಳ ಅಂತ್ಯಕ್ರಿಯೆ ಸಕಲ ಸಾರ್ವಜನಿಕರ ಸಮ್ಮುಖದಲ್ಲಿ ಕಣ್ಣೀರಿನ ಮಡುವಿನಲ್ಲಿ ನೆರವೇರಿತು.

Share this story