ಬೆಂಗಳೂರು:
ಕರ್ನಾಟಕದಲ್ಲಿ ತೀವ್ರ ಕುತೂಹಲ ಹಾಗೂ ವಿವಾದಗಳಿಗೆ ಕಾರಣವಾಗಿದ್ದ ಮತದಾರರ ಪಟ್ಟಿಯ ‘ವಿಶೇಷ ಸಂಪೂರ್ಣ ಪರಿಷ್ಕರಣೆ’ (SIR - Special Complete Revision) ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದೆ. ಚುನಾವಣಾ ಆಯೋಗವು (EC) ಇಂದು (ಮಂಗಳವಾರ) ಮಧ್ಯಾಹ್ನ 3 ಗಂಟೆಗೆ ಪರಿಷ್ಕೃತ ಮತದಾರರ ಅಂತಿಮ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದೆ.
ಕಳೆದ ಜೂನ್ 16ರಿಂದ ಚಾಲನೆಯಲ್ಲಿದ್ದ ಈ ಬೃಹತ್ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಸಲ್ಲಿಕೆಯಾಗಿದ್ದ ಎಲ್ಲಾ ಆಕ್ಷೇಪಣೆಗಳು ಹಾಗೂ ನೋಟೀಸ್‌ಗಳ ವಿಲೇವಾರಿ ಕಾರ್ಯ ಸಂಪೂರ್ಣಗೊಂಡಿದೆ. ಪರಿಣಾಮವಾಗಿ, ಇಂದಿನಿಂದ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾದ ಹಾಗೂ ರದ್ದುಗೊಂಡ ಮತದಾರರ ನಿಖರ ಅಂಕಿ-ಅಂಶಗಳು ಸಾರ್ವಜನಿಕರಿಗೆ ಲಭ್ಯವಾಗಲಿವೆ.
85 ರಿಂದ 95 ಲಕ್ಷ ಮತಗಳು ರದ್ದು..
ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ ರಾಜ್ಯದ ಒಟ್ಟು 4.50 ಕೋಟಿ ಮತದಾರರ ಪೈಕಿ ಸುಮಾರು 43.82 ಲಕ್ಷ ಜನರಿಗೆ ತಾಂತ್ರಿಕ ಲೋಪಗಳ ಹಿನ್ನೆಲೆಯಲ್ಲಿ ಆಯೋಗದಿಂದ ನೋಟೀಸ್ ಜಾರಿಯಾಗಿತ್ತು. ಈ ಎಲ್ಲಾ ನೋಟೀಸ್‌ಗಳ ವಿಚಾರಣೆಯನ್ನು ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ 5.54 ಕೋಟಿ ಒಟ್ಟು ಮತದಾರರಿದ್ದು, ಪರಿಷ್ಕರಣೆಯ ನಂತರದ ಪಟ್ಟಿಯಲ್ಲಿ 4.65 ಕೋಟಿ ಮತದಾರರು ಉಳಿದುಕೊಂಡಿದ್ದಾರೆ. ಚುನಾವಣಾ ಆಯೋಗದ ಅಂದಾಜಿನ ಪ್ರಕಾರ, ನಕಲಿ, ವಿಳಾಸ ಬದಲಾವಣೆ ಹಾಗೂ ತಾಂತ್ರಿಕ ದೋಷಗಳಿಂದಾಗಿ ಸರಿಸುಮಾರು 85 ರಿಂದ 95 ಲಕ್ಷ ಮತಗಳು ಪಟ್ಟಿಯಿಂದ ಅಳಿಸಿಹೋಗುವ ಸಾಧ್ಯತೆಯಿದೆ. ಇಂದು ಪ್ರಕಟವಾಗುವ ಪಟ್ಟಿಯಲ್ಲಿ ರದ್ದಾದ ಹೆಸರುಗಳ ಸಂಪೂರ್ಣ ವಿವರ ಸಿಗಲಿದೆ.
ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ.? ಹೀಗೆ ಪರಿಶೀಲಿಸಿ:
ಅಧಿಕೃತ ವೆಬ್‌ಸೈಟ್:
ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ (NVSP / Voter Service Portal) ನಿಮ್ಮ EPIC ಸಂಖ್ಯೆ ನಮೂದಿಸಿ ಪರಿಶೀಲಿಸಬಹುದು.
ಸ್ಥಳೀಯ ಕಚೇರಿಗಳು:
ನಿಮ್ಮ ವ್ಯಾಪ್ತಿಯ ತಾಲೂಕು ಕಚೇರಿ ಅಥವಾ ಮತಗಟ್ಟೆ ಅಧಿಕಾರಿಗಳನ್ನು (BLO) ಭೇಟಿ ಮಾಡಿ ಮಾಹಿತಿ ಪಡೆಯಬಹುದು.
ಆಕ್ಷೇಪಣೆಗೆ ಅವಕಾಶ:
ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ ಅಥವಾ ರದ್ದತಿ ಕುರಿತು ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಆಯೋಗ ನಿಗದಿಪಡಿಸಿದ ಕಾಲಮಿತಿಯೊಳಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ಆಯೋಗವು ಪೂರ್ಣ ಪ್ರಮಾಣದ ಅಧಿಕೃತ ಅಂಕಿ-ಅಂಶಗಳನ್ನು ಹೊರಹಾಕಲಿದ್ದು, ಇದು ರಾಜ್ಯ ರಾಜಕೀಯ ವಲಯದಲ್ಲೂ ಭಾರಿ ಸಂಚಲನ ಮೂಡಿಸುವ ನಿರೀಕ್ಷೆಯಿದೆ.


