ನವದೆಹಲಿ:
ಶೇ.100ರಷ್ಟು ಎಥೆನಾಲ್ ಇಂಧನ ಬಳಸಿ ಚಲಿಸುವ ವಾಹನಗಳನ್ನು ರಸ್ತೆಗಿಳಿಸಲು ಕೇಂದ್ರ ಸರ್ಕಾರ ಮಹತ್ವದ ಅನುಮೋದನೆ ನೀಡಿದೆ. ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ E100 ವಾಹನಗಳಿಗೂ ಅಧಿಕೃತ ಮಾನ್ಯತೆ ನೀಡಲಾಗಿದ್ದು, ಪರ್ಯಾಯ ಇಂಧನ ಬಳಕೆಯ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದೆ.
ಕೇಂದ್ರ ಸರ್ಕಾರದ ಈ ತಿದ್ದುಪಡಿಯಿಂದ ಈ ಹಿಂದೆ E20 ಇಂಧನಕ್ಕೆ ಸೀಮಿತವಾಗಿದ್ದ ಅನುಮತಿಯ ವ್ಯಾಪ್ತಿ ವಿಸ್ತರಣೆಯಾಗಿದೆ. ಇದೀಗ E85 ಮತ್ತು E100 ಇಂಧನ ಬಳಸಿ ಚಲಿಸುವ ವಾಹನಗಳಿಗೂ ಅನುಮತಿ ದೊರೆತಿದೆ.
ವಾಹನಗಳ ತೂಕದ ಮಿತಿಯಲ್ಲೂ ಬದಲಾವಣೆ
ನಿಯಮಗಳ ತಿದ್ದುಪಡಿಯಡಿ ವಾಹನಗಳ ಒಟ್ಟು ತೂಕದ ಗರಿಷ್ಠ ಮಿತಿಯನ್ನು 3,000 ಕೆ.ಜಿಯಿಂದ 3,500 ಕೆ.ಜಿಗೆ ಹೆಚ್ಚಿಸಲಾಗಿದೆ. ಇದರಿಂದ ಸಂಬಂಧಿತ ವಾಹನಗಳ ನಿಯಮಾವಳಿಗಳಲ್ಲಿ ಬದಲಾವಣೆ ತಂದಂತಾಗಿದೆ.
ವಿಶೇಷ ವಿನ್ಯಾಸದ ವಾಹನಗಳಿಗೆ ಮಾತ್ರ ಅವಕಾಶ
E20ಗಿಂತ ಹೆಚ್ಚಿನ ಪ್ರಮಾಣದ ಎಥೆನಾಲ್ ಇಂಧನ ಬಳಸುವ ವಾಹನಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸ್ಪಷ್ಟ ನಿಯಮ ರೂಪಿಸಿದೆ. ಇಂತಹ ಇಂಧನವನ್ನು ಬಳಸಲು ವಾಹನಗಳನ್ನು ಅದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿರಬೇಕು ಮತ್ತು ಅಗತ್ಯ ಪ್ರಮಾಣೀಕರಣವನ್ನು ಪಡೆದಿರಬೇಕು. ಈ ನಿಯಮವು ಫ್ಲೆಕ್ಸ್-ಫ್ಯುಯೆಲ್ ವಾಹನಗಳಿಗೆ ಅನ್ವಯಿಸುತ್ತದೆ.
ಕೇಂದ್ರ ಸರ್ಕಾರದ ಈ ಕ್ರಮದಿಂದ E85 ಮತ್ತು E100 ಇಂಧನ ಬಳಕೆಗೆ ಸಂಬಂಧಿಸಿದ ವಾಹನಗಳ ನಿಯಮಾವಳಿಗಳಿಗೆ ಅಧಿಕೃತ ಮಾನ್ಯತೆ ದೊರೆತಿದೆ. ಮುಂದಿನ ದಿನಗಳಲ್ಲಿ ಈ ವಾಹನಗಳ ತಯಾರಿಕೆ ಮತ್ತು ಬಳಕೆಗೆ ಸಂಬಂಧಿಸಿದ ಬೆಳವಣಿಗೆಗಳು ಮಹತ್ವ ಪಡೆಯಲಿವೆ.


