Public Prime News

CLEAR VISION, TRUE MISSION

ಬಂಟ್ವಾಳ: ಲಾರಿಯಿಂದ ಜಾರಿಬಿದ್ದ ಮರದ ದಿಮ್ಮಿ; ಸ್ಥಳದಲ್ಲೇ ಕಂಡಕ್ಟರ್ ದಾರುಣ ಸಾವು..!
local-news

ಬಂಟ್ವಾಳ: ಲಾರಿಯಿಂದ ಜಾರಿಬಿದ್ದ ಮರದ ದಿಮ್ಮಿ; ಸ್ಥಳದಲ್ಲೇ ಕಂಡಕ್ಟರ್ ದಾರುಣ ಸಾವು..!

Public Prime News

Public Prime News

Reported by Public Prime News

ದಕ್ಷಿಣ ಕನ್ನಡ/ಬಂಟ್ವಾಳ: 

ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ, ಮರದ ದಿಮ್ಮಿಯೊಂದು ಆಕಸ್ಮಿಕವಾಗಿ ಜಾರಿಬಿದ್ದು ಲಾರಿ ಕಂಡಕ್ಟರ್ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಂಟ್ವಾಳ ಕಸಬಾ ಗ್ರಾಮದ ಮಾಣಿ ಸಮೀಪದ ಶ್ರೀ ಮಾರುತಿ ಸಾ ಮಿಲ್‌ನಲ್ಲಿ ಸಂಭವಿಸಿದೆ.


ಮೃತರನ್ನು ಕೇರಳದ ಕಾಲಡಿ ನಿವಾಸಿ ಶಕೀಲ್ ಅಬ್ದುಲ್ ಅಜೀಬ್ (53) ಎಂದು ಗುರುತಿಸಲಾಗಿದೆ.


ಘಟನೆಯ ವಿವರ: 

ಕೇರಳದ ಕಾಲಡಿ ಮರದ ಮಿಲ್ಲಿನಿಂದ 'ಕೆಎ 22 ಎಎ 9799' ನೋಂದಣಿ ಸಂಖ್ಯೆಯ ಲಾರಿಯಲ್ಲಿ ಮರದ ದಿಮ್ಮಿಗಳನ್ನು ತುಂಬಿಕೊಂಡು ಸೆಪ್ಟೆಂಬರ್ 9ರಂದು ಮಧ್ಯಾಹ್ನ ಸುಮಾರು 2:10ಕ್ಕೆ ಮಾಣಿ ಸಮೀಪದ ಶ್ರೀ ಮಾರುತಿ ಸಾ ಮಿಲ್‌ಗೆ ತಲುಪಿಸಲಾಗಿತ್ತು. ಈ ಲಾರಿಯಲ್ಲಿ ಚಾಲಕ ಯಶ ಯರಮಾಳಕರ ಹಾಗೂ ಕಂಡಕ್ಟರ್ ಶಕೀಲ್ ಅಬ್ದುಲ್ ಅಜೀಬ್ ಕರ್ತವ್ಯದಲ್ಲಿದ್ದರು.


ಮಧ್ಯಾಹ್ನದ ಊಟದ ವಿರಾಮದ ಬಳಿಕ ಸುಮಾರು 3:45ರ ಸುಮಾರಿಗೆ ಇಬ್ಬರೂ ತಮ್ಮ ಕೆಲಸವನ್ನು ಪುನರಾರಂಭಿಸಿದ್ದರು. ಈ ವೇಳೆ ಚಾಲಕ ಲಾರಿಯನ್ನು ಹಿಂದಕ್ಕೆ (ರಿವರ್ಸ್) ಚಲಾಯಿಸುತ್ತಿದ್ದಾಗ, ಹಿಂಬದಿಯ ಪರಿಸ್ಥಿತಿಯನ್ನು ಸರಿಯಾಗಿ ಗಮನಿಸದೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿದ್ದಾನೆ ಎನ್ನಲಾಗಿದೆ. ಇದರ ಪರಿಣಾಮವಾಗಿ ಲಾರಿಯಲ್ಲಿದ್ದ ಬೃಹತ್ ಮರದ ದಿಮ್ಮಿಯೊಂದು ಜಾರಿ, ನೇರವಾಗಿ ಹಿಂಬದಿಯಲ್ಲಿದ್ದ ಕಂಡಕ್ಟರ್ ಶಕೀಲ್ ಅವರ ಮೇಲೆಯೇ ಉರುಳಿಬಿದ್ದಿದೆ.


ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು: 

ಮರದ ದಿಮ್ಮಿ ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡು ಶಕೀಲ್ ಅವರು ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ತಕ್ಷಣವೇ ಅವರನ್ನು ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆ ಈಗಾಗಲೇ ಮೃತಪಟ್ಟಿರುವುದಾಗಿ ಖಚಿತಪಡಿಸಿದರು.


ಪೊಲೀಸ್ ದೂರು ದಾಖಲು: 

ಈ ದುರ್ಘಟನೆಗೆ ಲಾರಿ ಚಾಲಕ ಯಶ ಯರಮಾಳಕರ ಅವರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಯೇ ನೇರ ಕಾರಣವೆಂದು ಆರೋಪಿಸಿ, ಪಿರ್ಯಾದಿದಾರರಾದ ಚಂದಪ್ಪ ಅವರು ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Share this story