ಉಡುಪಿ:
ಸರಕಾರಿ ಕಚೇರಿಗಳ ಅಲೆದಾಟ ತಪ್ಪಿಸಿ, ಸಾರ್ವಜನಿಕರ ಸಮಸ್ಯೆಗಳನ್ನು ಅವರಿದ್ದಲ್ಲಿಯೇ ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವ ಮಹತ್ವಾಕಾಂಕ್ಷಿ ‘ಪ್ರಜಾಸೇವಾ ಆಂದೋಲನ’ ಸಭೆಗೆ ಉಡುಪಿಯಲ್ಲಿ ಅದ್ಧೂರಿ ಹಾಗೂ ಯಶಸ್ವಿ ಚಾಲನೆ ನೀಡಲಾಗಿದೆ. ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಈ ಕಾರ್ಯಕ್ರಮ ಜರುಗಿತು.
ರಾಜ್ಯ ಸರ್ಕಾರದ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಅವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಜನಸಾಮಾನ್ಯರು ಸೌಲಭ್ಯಗಳಿಗಾಗಿ ವಾರಗಟ್ಟಲೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು ಮತ್ತು ಸರಕಾರ ಹಾಗೂ ಜನರ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಈ ಆಂದೋಲನದ ಮುಖ್ಯ ಉದ್ದೇಶ ಎಂದರು.
ಕರಾವಳಿ ಅಭಿವೃದ್ಧಿಗೆ ಸ್ಪೆಷಲ್ ಬೂಸ್ಟರ್:ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ಸಂಪುಟ ಸಭೆ
ಉಡುಪಿಯ ಪ್ರಬುದ್ಧ ಜನತೆಯನ್ನು ಶ್ಲಾಘಿಸಿದ ಸಚಿವರು, ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಸರಕಾರ ವಿಶೇಷ ಒತ್ತು ನೀಡಿದೆ ಎಂದರು.
ಪ್ರವಾಸೋದ್ಯಮ ಅಭಿವೃದ್ಧಿ, ಉದ್ಯೋಗಾವಕಾಶ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಇದೇ ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ವಿಶೇಷ ಸಂಪುಟ ಸಭೆ ನಡೆಯಲಿದೆ ಎಂದು ಪ್ರಮುಖ ಘೋಷಣೆ ಮಾಡಿದರು.
ಸ್ಥಳದಲ್ಲೇ 208 ಅರ್ಜಿಗಳು ಸಲ್ಲಿಕೆ: ತ್ವರಿತ ವಿಲೇವಾರಿಗೆ ಸೂಚನೆ
ಸಭೆಯಲ್ಲಿ ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳ ಕುರಿತು ಒಟ್ಟು 208 ಅರ್ಜಿಗಳು ಸಲ್ಲಿಕೆಯಾದವು.
ಮುಖ್ಯಾಂಶಗಳು:
ಖಾತೆ ಪೋಡಿ, ದರಕಾಸ್ತು ಜಮೀನು, ಕಾಲುದಾರಿ ಸಮಸ್ಯೆ, ಮನೆ ಹಾಗೂ ನಿವೇಶನ ಹಂಚಿಕೆ, ಚರಂಡಿ ವ್ಯವಸ್ಥೆ, ಕೆರೆಗಳ ಅಭಿವೃದ್ಧಿ ಹಾಗೂ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದ ಅರ್ಜಿಗಳು ಮುಖ್ಯವಾಗಿದ್ದವು.
ಸಚಿವರು ಪ್ರತಿಯೊಬ್ಬರ ಅಹವಾಲುಗಳನ್ನು ಶಾಂತಚಿತ್ತದಿಂದ ಆಲಿಸಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಧಿಕಾರಿಗಳ ಜವಾಬ್ದಾರಿ ನೆನಪಿಸಲು ಪ್ರಜಾಸೇವೆ ವೇದಿಕೆ: ಶಾಸಕ ಯಶಪಾಲ್ ಸುರ್ವಣ
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಡುಪಿ ಶಾಸಕ ಯಶಪಾಲ್ ಸುವರ್ಣ, ಪ್ರತಿಯೊಂದು ಇಲಾಖೆಗೆ ಚುರುಕು ಮುಟ್ಟಿಸಿ ಅಧಿಕಾರಿಗಳ ಕರ್ತವ್ಯ ಜಾಗೃತಗೊಳಿಸಲು ಈ ಸಭೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದರು.
ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಹೆಸರುವಾಸಿಯಾಗಿರುವ ಉಡುಪಿ ಜಿಲ್ಲೆಗೆ ಹೆಚ್ಚಿನ ಅನುದಾನ ಒದಗಿಸಿ, ವಿಶೇಷ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಾಸ್ತಾವಿಕ ನುಡಿಗಳನ್ನಾಡಿ, ಜಿಲ್ಲೆಯ ಪ್ರತಿ ಹಳ್ಳಿಯ ಮನೆಬಾಗಿಲಿಗೂ ಸರಕಾರದ ಸೌಲಭ್ಯಗಳನ್ನು ತಲುಪಿಸುವ ಈ ಅಭಿಯಾನವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿವಿಧ ಇಲಾಖೆಗಳ ಮಳಿಗೆ ಹಾಗೂ ಆರೋಗ್ಯ ಶಿಬಿರದ ವಿಶೇಷ ಆಕರ್ಷಣೆ
ಸಭೆಯ ಆವರಣದಲ್ಲಿ ವಿವಿಧ ಇಲಾಖೆಗಳಿಂದ ತೆರೆಯಲಾಗಿದ್ದ ಮಳಿಗೆಗಳು ಸಾರ್ವಜನಿಕರ ಗಮನ ಸೆಳೆದವು:
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ವಿವಿಧ ಯೋಜನೆಗಳ ಮಾಹಿತಿ.
ಸಮಾಜ ಕಲ್ಯಾಣ ಇಲಾಖೆ ಹಾಗೂ ಅಭಿವೃದ್ಧಿ ನಿಗಮಗಳಿಂದ ಸಾಲ ಸೌಲಭ್ಯಗಳ ಮಾರ್ಗದರ್ಶನ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಸಂಜೀವಿನಿ) ವತಿಯಿಂದ ಸ್ಥಳೀಯ ಉತ್ಪನ್ನಗಳ ಮಾರಾಟ ಮಳಿಗೆ.
ಕೃಷಿ, ತೋಟಗಾರಿಕೆ, ಆಯುಷ್, ಪಶುಸಂಗೋಪನೆ, ಕಾರ್ಮಿಕ ಮತ್ತು ಮೀನುಗಾರಿಕೆ ಇಲಾಖೆಗಳಿಂದ ಮಾಹಿತಿ ಪ್ರದರ್ಶನ.
ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಉತ್ತಮ ಸ್ಪಂದನೆ ದೊರೆಯಿತು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜನಾಥ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿ.ಪಂ ಸಿಇಒ ಪ್ರತೀಕ್ ಬಾಯಲ್, ಎಸ್ಪಿ ಹರಿರಾಂ ಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಸ್ವಾಗತಿಸಿ, ರೋಷನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


