ಕಳೆದ ಮೇ ತಿಂಗಳಿನಿಂದೀಚೆಗೆ ಮಾರುತಿ ಸುಜುಕಿ ಕಾರುಗಳ ಬೆಲೆ ಹೆಚ್ಚಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಆದಾಗ್ಯೂ, ಹಿಂದಿನ ಎರಡು ಬಾರಿ ಕಂಪನಿಯು ತನ್ನ ಎಲ್ಲಾ ಪೋರ್ಟ್‌ಫೋಲಿಯೋದ ಬಹುತೇಕ ಮಾಡೆಲ್ಸ್‌ಗಳ ಬೆಲೆಯನ್ನು ಏರಿಕೆ ಮಾಡಿತ್ತು; ಆದರೆ ಈ ಬಾರಿ ಕೇವಲ ಆಯ್ದ ಮಾಡೆಲ್ಸ್‌ಗಳಿಗೆ ಮಾತ್ರ ಬೆಲೆ ಹೆಚ್ಚಳ ಸೀಮಿತಗೊಳಿಸಲಾಗಿದೆ.
ಬೆಲೆ ಏರಿಕೆಗೆ ಅಸಲಿ ಕಾರಣವೇನು.?
ಕಾರುಗಳ ತಯಾರಿಕೆಗೆ ಪ್ರಮುಖವಾಗಿ ಬೇಕಾಗುವ ಸ್ಟೀಲ್, ಅಲ್ಯೂಮಿನಿಯಂ ಮತ್ತು ಪ್ಲಾಸ್ಟಿಕ್ ಸೇರಿದಂತೆ ವಿವಿಧ ಕಚ್ಚಾ ವಸ್ತುಗಳ ಬೆಲೆಗಳು ಮಾರುಕಟ್ಟೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿವೆ. ಈ ಹೆಚ್ಚುವರಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಕಂಪನಿಯು ಆಂತರಿಕವಾಗಿ ಹಲವು ವೆಚ್ಚ ನಿಯಂತ್ರಣ ಕ್ರಮಗಳನ್ನು ಕೈಗೊಂಡಿತ್ತು.
ಆದಾಗ್ಯೂ, ಹಣದುಬ್ಬರದ ಪ್ರಭಾವ ಹಾಗೂ ಪ್ರತಿಕೂಲ ವೆಚ್ಚ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಉತ್ಪಾದನಾ ವೆಚ್ಚದ ಒಂದು ಭಾಗವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಯಿತು ಎಂದು ಕಂಪನಿ ತಿಳಿಸಿದೆ. ಗ್ರಾಹಕರ ಮೇಲಿನ ಹೊರೆ ಸಾಧ್ಯವಾದಷ್ಟು ಕನಿಷ್ಠ ಮಟ್ಟದಲ್ಲಿರಲು ಕ್ರಮ ವಹಿಸಲಾಗಿದೆ ಎಂದು ಮಾರುತಿ ಸುಜುಕಿ ಸ್ಪಷ್ಟಪಡಿಸಿದೆ.
ಹಬ್ಬದ ಸೀಸನ್ ಮೇಲೆ ಬೀರಲಿದೆಯೆ ಪರಿಣಾಮ.?
ಸಾಮಾನ್ಯವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಹಬ್ಬದ ಸೀಸನ್ ಆರಂಭವಾಗುತ್ತಿದ್ದಂತೆ ಆಟೋಮೊಬೈಲ್ ಮಾರಾಟ ಗರಿಗೆದರುತ್ತದೆ. ಕಾರು ಖರೀದಿಸಲು ಗ್ರಾಹಕರು ಮುಂಚೂಣಿಗೆ ಬರುವ ಈ ನಿರ್ಣಾಯಕ ಸಮಯದಲ್ಲಿ ಮಾರುತಿ ಸುಜುಕಿ ತೆಗೆದುಕೊಂಡಿರುವ ಈ ಬೆಲೆ ಏರಿಕೆಯ ನಿರ್ಣಯವು ಮಧ್ಯಮ ವರ್ಗದ ಕಾರು ಖರೀದಿದಾರರ ಬಜೆಟ್ ಮೇಲೆ ಕೊಂಚ ಹೆಚ್ಚುವರಿ ಹೊರೆ ಬೀಳುವಂತೆ ಮಾಡಿದೆ.


