ಉಡುಪಿ:
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ಮತ್ತು ಪಾದಯಾತ್ರೆ ನಡೆಯಿತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅಣಕು ಶವಯಾತ್ರೆ ನಡೆಸಿ, ಪ್ರತಿಕೃತಿ ದಹಿಸುವ ಮೂಲಕ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬ್ರಹ್ಮಾವರದ ಬಂಟರ ಭವನದಿಂದ ಆರಂಭವಾದ ಪಾದಯಾತ್ರೆಯು ಆಕಾಶವಾಣಿ ವೃತ್ತ, ಗಾಂಧಿ ಮೈದಾನ ಮತ್ತು ಮಾರ್ಕೆಟ್ ರಸ್ತೆಯ ಮೂಲಕ ಸಾಗಿ ಬಸ್ ನಿಲ್ದಾಣದಲ್ಲಿ ಅಂತ್ಯಗೊಂಡಿತು. ಪಾದಯಾತ್ರೆಯುದ್ದಕ್ಕೂ ಕಾರ್ಯಕರ್ತರು ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮತದಾನದ ಹಕ್ಕು ಕಸಿಯುವ ಪ್ರಯತ್ನ: ಕಾಂಗ್ರೆಸ್ ಆರೋಪ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಮಧ್ಯಮ ವರ್ಗದವರು, ಬಡವರು ಹಾಗೂ ಕಾರ್ಮಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿಯೂ ಸುಮಾರು 15 ಸಾವಿರ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅವರು ದೂರಿದರು. ಗ್ರಾಮೀಣ ಪ್ರದೇಶಗಳ ಅನಕ್ಷರಸ್ಥರು ಹಾಗೂ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದ ಜನರು ಈ ಪ್ರಕ್ರಿಯೆಯಿಂದ ತೊಂದರೆಗೊಳಗಾಗುವ ಆತಂಕವಿದೆ. ಅರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಸಾದ್ ರಾಜ್ ಕಾಂಚನ್, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಎಸ್‌ಐಆರ್ ಪ್ರಕ್ರಿಯೆ ಜಾರಿಗೊಳಿಸಿದೆ ಎಂದು ಆರೋಪಿಸಿದರು.
ಬಡವರು ಮತ್ತು ಹಿಂದುಳಿದ ವರ್ಗಗಳ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ ಮತದಾರರು ಇಂತಹ ತಂತ್ರಗಳಿಗೆ ಮಣಿಯುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ದೇಶಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗಿ
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಮಾತನಾಡಿದರು. ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ಮುಖಂಡರಾದ ವೆರೋನಿಕಾ ಕರ್ನೇಲಿಯೋ, ಉದಯ್ ಆಚಾರ್, ಕುಮಾರ್, ಅಮೃತ್ ಶೆಣೈ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.


