Public Prime News

CLEAR VISION, TRUE MISSION

ಕಾವೇರಿ ವಿವಾದ: ತಮಿಳುನಾಡಿಗೆ ನೀರು ಬಿಡದಂತೆ ಬಸವರಾಜ ಬೊಮ್ಮಾಯಿ ಆಗ್ರಹ..!
politics

ಕಾವೇರಿ ವಿವಾದ: ತಮಿಳುನಾಡಿಗೆ ನೀರು ಬಿಡದಂತೆ ಬಸವರಾಜ ಬೊಮ್ಮಾಯಿ ಆಗ್ರಹ..!

Public Prime News

Public Prime News

Reported by Public Prime News

ಬೆಂಗಳೂರು: 

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಕೈಚೆಲ್ಲಿ ಕೂತಿದೆ ಎಂದು ರೈತರು ಹಾಗೂ ಕಾವೇರಿ ಜಲಾನಯನ ಪ್ರದೇಶದ ಜನರಲ್ಲಿ ತೀವ್ರ ಭಾವನೆ ಮೂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ. ಕೂಡಲೇ ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಕಾವೇರಿ ನೀರಿನ ಹಂಚಿಕೆಯಲ್ಲಿ ಕರ್ನಾಟಕ ನಿರಂತರವಾಗಿ ಸಂಕಷ್ಟ ಎದುರಿಸುತ್ತಿದ್ದು, ನಮ್ಮ ಸಮಸ್ಯೆ ಹಾಗೂ ವಾಸ್ತವ ಪರಿಸ್ಥಿತಿಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮುಂದೆ ಪರಿಣಾಮಕಾರಿಯಾಗಿ ಮಂಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.


ಬೊಮ್ಮಾಯಿ ಪ್ರಮುಖ ಆರೋಪಗಳು ಮತ್ತು ಆತಂಕಗಳು:

  • ಅಧಿಕಾರಿಗಳು ಏನೇ ಹೇಳಿದರೂ, ವಾಸ್ತವ ಪರಿಸ್ಥಿತಿ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಮನವರಿಕೆ ಮಾಡಲು ಸರ್ಕಾರ ವಿಫಲವಾಗಿದೆ.


  • ಪ್ರಸ್ತುತ ಆದೇಶದ ಪ್ರಕಾರ 15 ದಿನಗಳ ಕಾಲ ಪ್ರತಿದಿನ 6,000 ಕ್ಯೂಸೆಕ್ಸ್ ನೀರು ಬಿಡಬೇಕಾಗಿದ್ದು, ಇದರಿಂದ ಸುಮಾರು 7.5 ಟಿಎಂಸಿ ನೀರು ರಾಜ್ಯದಿಂದ ಹೊರಹೋಗಲಿದೆ.


  • ಈಗಾಗಲೇ ಕಬಿನಿ ಜಲಾಶಯದ ನೀರಿನ ಸಂಗ್ರಹ ಅರ್ಧಕ್ಕೆ ಇಳಿದಿದೆ. ಕೆಆರ್‌ಎಸ್‌ನಿಂದಲೂ ಪ್ರತಿದಿನ ಸುಮಾರು 5,000ರಿಂದ 6,000 ಕ್ಯೂಸೆಕ್ಸ್ ನೀರು ಬಿಡುತ್ತಿರುವುದರಿಂದ ಪ್ರತಿದಿನ ಅರ್ಧ ಟಿಎಂಸಿ ನೀರು ಖಾಲಿಯಾಗುತ್ತಿದೆ.


  • ಮುಂದಿನ ದಿನಗಳಲ್ಲಿ ಮಳೆಯಾಗುವ ಲಕ್ಷಣಗಳೂ ಕಾಣಿಸುತ್ತಿಲ್ಲವಾದ್ದರಿಂದ ರಾಜ್ಯ ಸರ್ಕಾರ ಈ ವಿಚಾರವನ್ನು ಅತಿ ಗಂಭೀರವಾಗಿ ಪರಿಗಣಿಸಬೇಕು.


ಕರ್ನಾಟಕವೇ 'ಪಿಟಿಷನರ್' ಆಗಬೇಕು: 

ಪ್ರತಿ ಬಾರಿ ತಮಿಳುನಾಡಿನ ಅರ್ಜಿಗೆ ಉತ್ತರಿಸುವ 'ರೆಸ್ಪಾಂಡೆಂಟ್' ಆಗುವ ಬದಲು, ಕರ್ನಾಟಕವೇ ಸ್ವತಃ 'ಪಿಟಿಷನರ್' ಆಗಿ ಮೇಲ್ಮನವಿ ಸಲ್ಲಿಸಬೇಕು. ಕೇವಲ ಅಂಕಿ-ಅಂಶಗಳನ್ನು ಮಾತ್ರ ಮುಂದಿಡದೆ, ನೀರು ಬಿಡುವುದರಿಂದ ರಾಜ್ಯದ ರೈತರು ಹಾಗೂ ಕುಡಿಯುವ ನೀರಿಗೆ ಎದುರಾಗುವ ಭೀಕರ ಸಂಕಷ್ಟವನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ಹಿರಿಯ ನ್ಯಾಯವಾದಿಯನ್ನು ನೇಮಿಸಬೇಕು ಮತ್ತು ಈಗಿರುವ ವ್ಯವಸ್ಥೆಯಿಂದ ರಾಜ್ಯಕ್ಕೆ ಪರಿಹಾರ ಸಿಕ್ಕಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


ದೆಹಲಿಗೆ ತೆರಳಿ ಕಾನೂನು ತಜ್ಞರೊಂದಿಗೆ ಚರ್ಚಿಸಿ: 

ಮಂತ್ರಿಮಂಡಲ ರಚನೆ ಸೇರಿದಂತೆ ಇತರೆ ರಾಜಕೀಯ ವಿಚಾರಗಳಿಗೆ ದೆಹಲಿಗೆ ತೆರಳುವ ಮುಖ್ಯಮಂತ್ರಿಗಳು, ಕಾವೇರಿ ವಿಚಾರದಲ್ಲೂ ಕೂಡಲೇ ದೆಹಲಿಗೆ ತೆರಳಿ ಕಾನೂನು ಹಾಗೂ ತಾಂತ್ರಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ನ್ಯಾಯಾಂಗ ತಂಡಕ್ಕೆ ಹೊಸ ಶಕ್ತಿ ತುಂಬಬೇಕು ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ. 


ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ಕಾವೇರಿ ಜಲಾನಯನ ಪ್ರದೇಶ ಮಾತ್ರವಲ್ಲದೆ ಬೆಂಗಳೂರು ಕೂಡ ತೀವ್ರ ಕುಡಿಯುವ ನೀರಿನ ಹಾಹಾಕಾರ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.


ತಮಿಳುನಾಡು ದುರಾಸೆ ಹಾಗೂ ಜನರ ಶಾಪದ ಎಚ್ಚರಿಕೆ: 

ತಮಿಳುನಾಡು ಮೆಟ್ಟೂರು ಜಲಾಶಯದಿಂದ ಒಟ್ಟು 40 ಟಿಎಂಸಿ ಹಾಗೂ ಒಟ್ಟು 80 ಟಿಎಂಸಿ ನೀರು ಬಿಡುವ ಕಾರ್ಯಕ್ರಮ ಹಾಕಿಕೊಂಡಿದೆ ಎಂದು ತಿಳಿಸಿರುವ ಬೊಮ್ಮಾಯಿ, ಅಲ್ಲಿನ ಸಚಿವರು ಮೂರನೇ ಬೆಳೆಗೆ ನೀರು ಹರಿಸುವ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಬೆಳೆಗಳಿಗಾಗಿ ನೀರು ಕೇಳಲಾಗುತ್ತಿದ್ದು, ಕರ್ನಾಟಕದಲ್ಲಿ ಮಾತ್ರ ಜನರ ಕುಡಿಯುವ ನೀರು ಹಾಗೂ ರೈತರ ಬದುಕಿನ ಪ್ರಶ್ನೆಯಾಗಿದೆ. ಈ ಕಟುಸತ್ಯವನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು ಎಂದಿದ್ದಾರೆ.


ಇಲ್ಲವಾದರೆ ಕಾವೇರಿ ಭಾಗದ ಜನರು ಸರ್ಕಾರಕ್ಕೆ ಶಾಪ ಹಾಕುವುದಷ್ಟೇ ಅಲ್ಲದೆ, ಕಳೆದ ಬಾರಿ ಬೆಂಬಲ ನೀಡಿದ ಜನರ ವಿಶ್ವಾಸ ಹಾಗೂ ಬೆಂಬಲವೂ ಮುಂದಿನ ದಿನಗಳಲ್ಲಿ ಶೂನ್ಯವಾಗಬಹುದು ಎಂದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗೆ ಬೊಮ್ಮಾಯಿ ಕಠಿಣ ಎಚ್ಚರಿಕೆ ನೀಡಿದ್ದಾರೆ.

Share this story