ಮಹಬೂಬಾಬಾದ್:
ಪತಿ ವೀಡಿಯೊ ಕಾಲ್ ಸ್ವೀಕರಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮನನೊಂದ 20 ವರ್ಷದ ಯುವತಿಯೊಬ್ಬರು ವಿಪರೀತ ನಿರ್ಧಾರ ಕೈಗೊಂಡು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ವರದಿಯಾಗಿದೆ.
ಮೃತರನ್ನು ವಾರಂಗಲ್ ಮೂಲದ ಅಖಿಲಾ (20) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಅಖಿಲಾ ಅವರಿಗೆ ಎರಡು ವರ್ಷಗಳ ಹಿಂದೆ ಮಹಬೂಬಾಬಾದ್‌ನ ಹುಸೇನ್ ಎಂಬವರ ಜತೆ ವಿವಾಹವಾಗಿತ್ತು. ದಂಪತಿಗೆ ಒಂದು ಚಿಕ್ಕ ಮಗುವೂ ಇದೆ.
ಘಟನೆಯ ಹಿನ್ನೆಲೆ ಏನು.?
ಸೆಪ್ಟೆಂಬರ್ 2ರಂದು ಅಖಿಲಾ ಅವರು ತಮ್ಮ ತವರುಮನೆಯಲ್ಲಿದ್ದರು. ಈ ವೇಳೆ ಮಗು ಜೋರಾಗಿ ಅಳುತ್ತಿರುವುದನ್ನು ಕಂಡು, ಮಗುವನ್ನು ತೋರಿಸಲು ಪತಿ ಹುಸೇನ್ ಅವರಿಗೆ ವೀಡಿಯೊ ಕಾಲ್ ಮಾಡಿದ್ದಾರೆ. ಆದರೆ, ಇತ್ತ ಕಡೆಯಿಂದ ಪತಿ ಕರೆ ಸ್ವೀಕರಿಸಿರಲಿಲ್ಲ.
ಪತಿ ಕರೆ ಸ್ವೀಕರಿಸದ ಕಾರಣ ತೀವ್ರ ಮನನೊಂದ ಅಖಿಲಾ, ತಕ್ಷಣವೇ ತವರುಮೆಯಿಂದ ಮಹಬೂಬಾಬಾದ್‌ನಲ್ಲಿರುವ ಅತ್ತೆ-ಮಾವನ ಮನೆಗೆ ತೆರಳಿದ್ದಾರೆ. ಅಲ್ಲಿ ಮನೆಯಲ್ಲಿ ಯಾರೂ ಗಮನಿಸದ ವೇಳೆ ವಿಷಕಾರಿ ವಸ್ತುವನ್ನು ಸೇವಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಅಖಿಲಾ ಅಸ್ವಸ್ಥಳಾಗಿರುವುದು ಕುಟುಂಬಸ್ಥರ ಗಮನಕ್ಕೆ ಬಂದಿದೆ.
ಕೂಡಲೇ ಎಚ್ಚೆತ್ತ ಕುಟುಂಬಸ್ಥರು ಯುವತಿಯನ್ನು ತುರ್ತಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ದುರದೃಷ್ಟವಶಾತ್ ಅಖಿಲಾ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.
ಪೊಲೀಸರ ತನಿಖೆ ಮುಂದುವರಿಕೆ
ಈ ದುರ್ಘಟನೆ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಪತಿ ಹಾಗೂ ಕುಟುಂಬಸ್ಥರಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಆತ್ಮಹತ್ಯೆಗೆ ಬೇರೆೇನಾದರೂ ಕಾರಣಗಳಿವೆಯಾ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಕಣ್ಣ ಮುಂದಿರುವ ಮಗುವಿನ ಭವಿಷ್ಯ ಹಾಗೂ ಸಣ್ಣ ಪುಟ್ಟ ಕಾರಣಗಳಿಗೆ ಇಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಜೀವನದಲ್ಲಿ ಎಷ್ಟೇ ಕಷ್ಟ-ನಷ್ಟಗಳು ಬಂದರೂ ಆತ್ಮಹತ್ಯೆ ಪರಿಹಾರವಲ್ಲ.


