ಮಂಗಳೂರು:
ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳವು ನಡೆಸಿ, ಕಳೆದ ಐದು ವರ್ಷಗಳಿಂದ ನ್ಯಾಯಾಲಯದ ವಿಚಾರನೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಹಿಳೆಯೊಬ್ಬರನ್ನು ಕಾವೂರು ಠಾಣೆಯ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಂಗಳೂರಿನ ಆಕಾಶ ಭವನದ ಆನಂದ ನಗರ ನಿವಾಸಿ ಲತಾ ಮಾರಿಯಾ (44) ಎಂದು ಗುರುತಿಸಲಾಗಿದೆ.
ಐದು ವರ್ಷಗಳ ಹಿಂದೆ ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಲತಾ ಮಾರಿಯಾ ಕಳವು ಎಸಗಿದ್ದರು ಎಂಬ ಗಂಭೀರ ಆರೋಪದಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ಬಳಿಕ ಪೊಲೀಸರ ಕೈಗೆ ಸಿಗದೆ ಹಾಗೂ ನ್ಯಾಯಾಲಯದ ಕಲಾಪಗಳಿಗೂ ಗೈರುಹಾಜರಾಗುವ ಮೂಲಕ ಅವರು ತಲೆಮರೆಸಿಕೊಂಡಿದ್ದರು.
ದೀರ್ಘಕಾಲದಿಂದ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯವು ಆರೋಪಿಯ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿತ್ತು.
ನ್ಯಾಯಾಲಯದ ವಾರಂಟ್ ಆಧರಿಸಿ ಕಾರ್ಯಾಚರಣೆಕ್ಕಿಳಿದ ಕಾವೂರು ಪೊಲೀಸರು, ಖಚಿತ ಮಾಹಿತಿ ಮೇರೆಗೆ ಜ್ಯೋತಿನಗರದಲ್ಲಿ ಲತಾ ಮಾರಿಯಾ ಅವರನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.
ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.


