ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯ ಬೃಹತ್ ಹಗರಣದ ತನಿಖೆಯನ್ನು ಸಿಐಡಿ (CID) ಅಧಿಕಾರಿಗಳು ತೀವ್ರಗೊಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಮಧ್ಯವರ್ತಿ ಬಸವರಾಜ ಕನ್ನಾಳೆಯನ್ನು ಬಂಧಿಸಿದ್ದಾರೆ. ಬಂಧಿತ ಇಬ್ಬರೂ ಆರೋಪಿಗಳನ್ನು ನ್ಯಾಯಾಲಯವು 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಿದೆ.
ಭ್ರಷ್ಟಾಚಾರದ ಜಾಲ ಮತ್ತು ಒಪ್ಪಂದದ ರಹಸ್ಯ:
ತನಿಖೆಯ ವೇಳೆ ಆರೋಪಿಗಳ ಭ್ರಷ್ಟಾಚಾರದ ಜಾಲ ತೆರೆದುಕೊಂಡಿದ್ದು, ಬೀದರ್‌ನ ಭಾಲ್ಕಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಅವಧಿಯಿಂದಲೇ ಜ್ಞಾನೇಂದ್ರ ಹಾಗೂ ಬಸವರಾಜ ನಡುವೆ ನಿಕಟ ಸ್ನೇಹವಿತ್ತು. 'ಮುಂದೆ ರಾಜಕೀಯ ನಾಯಕರ ಬೆಂಬಲದಿಂದ ಎಂಎಲ್‌ಎ ಆಗುತ್ತೇನೆ, ಅದಕ್ಕಾಗಿ ದೊಡ್ಡ ಮಟ್ಟದ ಹಣ ಬೇಕು' ಎಂದು ಬಸವರಾಜ, ಜ್ಞಾನೇಂದ್ರ ಅವರ ಬಳಿ ಪ್ರಶ್ನೆಪತ್ರಿಕೆಗಳನ್ನು ಪಡೆದುಕೊಂಡಿದ್ದನು.
ನಂತರ ಪ್ರತಿಯೊಂದು ಹುದ್ದೆಗೆ 40 ಲಕ್ಷದಿಂದ 80 ಲಕ್ಷ ರೂಪಾಯಿವರೆಗೆ ಬೆಲೆ ನಿಗದಿಪಡಿಸಿ, 29ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಮುಂಗಡ ಹಣ ಪಡೆದು ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಲೀಕ್ ಮಾಡಲಾಗಿತ್ತು. ಈ ಅಕ್ರಮ ವ್ಯವಹಾರವನ್ನು ಬೆಂಗಳೂರಿನ ರಾಜಾಜಿನಗರದ ಕಚೇರಿಯೊಂದರಲ್ಲಿ ಒಪ್ಪಂದ ಮಾಡಿಕೊಂಡು ನಡೆಸಲಾಗಿತ್ತು.
ಖಾಸಗಿ ರೆಸಾರ್ಟ್‌ಗಳಲ್ಲಿ ಪರೀಕ್ಷಾ ಅಕ್ರಮ:
ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳಿಗೆ ಸಾಮಾನ್ಯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಸುವ ಬದಲು, ಬೆಂಗಳೂರು, ತುಮಕೂರಿನ ದೇವರಾಯನದುರ್ಗ ಹಾಗೂ ಆಂಧ್ರಪ್ರದೇಶದ ಖಾಸಗಿ ರೆಸಾರ್ಟ್‌ಗಳಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗಿತ್ತು ಎಂಬ ಆಘಾತಕಾರಿ ಸತ್ಯ ಸಿಐಡಿ ವಿಚಾರಣೆಯಿಂದ ಹೊರಬಿದ್ದಿದೆ.
ಪ್ರಕರಣದಲ್ಲಿ ತನಿಖೆ ಕಟ್ಟುನಿಟ್ಟಾಗುತ್ತಿದ್ದಂತೆ, ಸಿಐಡಿ ಬಂಧನದ ಭೀತಿಯಲ್ಲಿದ್ದ ಅಭ್ಯರ್ಥಿಗಳು ತಪ್ರೊಪ್ಪಿಕೊಳ್ಳಲು ಆರಂಭಿಸಿದ್ದಾರೆ. ಸುಹೇಲ್ ಸೇರಿದಂತೆ ಒಟ್ಟು 10 ಅಭ್ಯರ್ಥಿಗಳು ತಾವಾಗಿಯೇ ಮುಂದೆ ಬಂದು ತಪ್ರೊಪ್ಪಿಗೆ ಹೇಳಿಕೆ ನೀಡಿದ್ದು, ಅಪ್ರೂವರ್ (ಸಾಕ್ಷಿ) ಆಗಲು ಸಿದ್ಧರಾಗಿದ್ದಾರೆ. ಈಗಾಗಲೇ 6 ಅಭ್ಯರ್ಥಿಗಳ ಅಧಿಕೃತ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಸಿಐಡಿ, ಇವರನ್ನು ಕಾನೂನುಬದ್ಧವಾಗಿ ಸಾಕ್ಷಿಗಳನ್ನಾಗಿ ಮಾಡಿಕೊಳ್ಳುವ ಕುರಿತು ಕಾನೂನು ತಜ್ಞರ ಸಲಹೆ ಪಡೆಯುತ್ತಿದೆ.
ಪ್ರಮುಖ ಆರೋಪಿಗಳ ಪಟ್ಟಿ ರಿಮಾಂಡ್ ಅರ್ಜಿಯಲ್ಲಿ ಉಲ್ಲೇಖ:
ಸಿಐಡಿ ಸಲ್ಲಿಸಿರುವ ರಿಮಾಂಡ್ ಅರ್ಜಿಯಲ್ಲಿ ಪ್ರಮುಖ ಆರೋಪಿಗಳ ವಿವರ ನೀಡಲಾಗಿದೆ:
A1: KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್
A2 & A3: ಆಯೋಗದ ಸದಸ್ಯರು ಹಾಗೂ ಅಧಿಕಾರಿಗಳು
A4: ಪರೀಕ್ಷೆ ಬರೆದ 29 ಅಭ್ಯರ್ಥಿಗಳು
A5: ಬಂಧಿತ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್
ಸದ್ಯ ಅಧಿಕಾರಿಗಳು ಆರೋಪಿಗಳ ಬ್ಯಾಂಕ್ ಖಾತೆಗಳು ಹಾಗೂ ಡಿಜಿಟಲ್ ಪುರಾವೆಗಳ ತನಿಖೆಯನ್ನು ಮುಂದುವರಿಸಿದ್ದಾರೆ.


