ಕಾಕಿನಾಡ/ಆಂಧ್ರಪ್ರದೇಶ:
ಮಾರುಕಟ್ಟೆಯಲ್ಲಿ MRP (ಗರಿಷ್ಠ ಚಿಲ್ಲರೆ ಬೆಲೆ) ಗಿಂತ ಹೆಚ್ಚಿನ ಹಣವನ್ನು ಗ್ರಾಹಕರಿಂದ ವಸೂಲಿ ಮಾಡುವುದು ಸಾಮಾನ್ಯ ಅಪರಾಧ ಎಂಬಂತೆ ಬಿಂಬಿತವಾಗಿದ್ದರೂ, ಆಂಧ್ರಪ್ರದೇಶದಲ್ಲಿ ನಡೆದಿರುವ ಇತ್ತೀಚಿನ ಘಟನೆಯೊಂದು ವ್ಯಾಪಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.
ನೀರಿನ ಬಾಟಲಿಗೆ ನಿಗದಿತ ದರಕ್ಕಿಂತ ಕೇವಲ 7 ರೂಪಾಯಿ ಹೆಚ್ಚು ಪಡೆದ ಅಂಗಡಿ ಮಾಲೀಕನಿಗೆ ಗ್ರಾಹಕರ ಆಯೋಗವು ಬರೋಬ್ಬರಿ 7 ಲಕ್ಷ ರೂಪಾಯಿ ದಂಡ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ ಏನು.?
ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪಿಠಾಪುರಂ ನಿವಾಸಿ ಹಾಗೂ ಭಕ್ತರಾದ ಡಿ. ವೆಂಕಟೇಶ್ವರ ರಾವ್ ಅವರು ಫೆಬ್ರವರಿ 22ರಂದು ಪ್ರಸಿದ್ಧ ಅನ್ನವರಂ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸತ್ಯಗಿರಿ ಬೆಟ್ಟದ ಮೇಲಿರುವ ‘ಸತ್ಯದೇವ ಫ್ಯಾನ್ಸಿ, ಕೋಕೊನಟ್ಸ್ ಅಂಡ್ ಕೂಲ್ ಡ್ರಿಂಕ್ಸ್’ ಅಂಗಡಿಯಲ್ಲಿ ನೀರಿನ ಬಾಟಲಿ ಖರೀದಿಸಿದ್ದರು.
ಬಾಟಲಿಯ ಗರಿಷ್ಠ ಚಿಲ್ಲರೆ ಬೆಲೆ (MRP) 18 ರೂ. ಇದ್ದರೂ, ಅಂಗಡಿಯಾತ ಗ್ರಾಹಕರಿಂದ 25 ರೂ. ವಸೂಲಿ ಮಾಡಿದ್ದನು. ಅಂದರೆ ನಿಗದಿತ ದರಕ್ಕಿಂತ 7 ರೂ. ಹೆಚ್ಚಿಗೆ ಪಡೆದಿದ್ದನ್ನು ವೆಂಕಟೇಶ್ವರ ರಾವ್ ಪ್ರಶ್ನಿಸಿದ್ದರು. ಅಲ್ಲದೆ, ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳೊಂದಿಗೆ ಅನ್ನವರಂ ದೇವಸ್ಥಾನದ ಆಡಳಿತ ಮಂಡಳಿಗೆ ವಾಟ್ಸ್‌ಆ್ಯಪ್ ಮೂಲಕ ದೂರು ನೀಡಿದ್ದರು. ಆದರೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಅವರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.
ಆಯೋಗ ವಿಧಿಸಿದ ದಂಡದ ವಿವರಗಳು:
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಸಿ.ಎಚ್. ರಘುಪತಿ ವಸಂತ ಕುಮಾರ್ ಹಾಗೂ ಸದಸ್ಯರಾದ ಚಕ್ಕಾ ಸುಶಿ ಮತ್ತು ಚಗಂಟಿ ನಾಗೇಶ್ವರ ರಾವ್ ಅವರ ಪೀಠವು ಈ ಕೆಳಗಿನಂತೆ ಆದೇಶಿಸಿದೆ:
₹7 – ಗ್ರಾಹಕರಿಂದ ಹೆಚ್ಚುವರಿಯಾಗಿ ಪಡೆದ ಹಣವನ್ನು ಮರುಪಾವತಿಸಬೇಕು.
₹10,000 – ಗ್ರಾಹಕರಿಗೆ ಉಂಟಾದ ಮಾನಸಿಕ ವೇದನೆಗೆ ಪರಿಹಾರ ನೀಡಬೇಕು.
₹5,000 – ಕಾನೂನು ಹೋರಾಟದ ವೆಚ್ಚವಾಗಿ ಪಾವತಿಸಬೇಕು.
₹7,00,000 – ಗ್ರಾಹಕ ಕಲ್ಯಾಣ ನಿಧಿಗೆ ದಂಡದ ರೂಪದಲ್ಲಿ ಜಮೆ ಮಾಡಬೇಕು.
ಆದೇಶ ಹೊರಡಿಸಿದ ದಿನದಿಂದ 45 ದಿನಗಳೊಳಗೆ ಸಂಪೂರ್ಣ ಮೊತ್ತವನ್ನು ಪಾವತಿಸುವಂತೆ ಸೂಚಿಸಿರುವ ಆಯೋಗ, ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಗ್ರಾಹಕರ ಹಕ್ಕುಗಳ ಜಾಗೃತಿಗೆ ಸ್ಪಷ್ಟ ಸಂದೇಶ
ಅತೀಯಾದ ಲಾಭದ ಆಸೆಗೆ ಬಿದ್ದು ಗ್ರಾಹಕರ ಜೇಬಿಗೆಕತ್ತರಿ ಹಾಕುವ ವ್ಯಾಪಾರಿಗಳಿಗೆ ಈ ತೀರ್ಪು ಒಂದು ದೊಡ್ಡ ಪಾಠವಾಗಿದೆ. ಕೇವಲ 7 ರೂಪಾಯಿಗಾಗಿ ಕಾನೂನು ಹೋರಾಟ ನಡೆಸಿ ನ್ಯಾಯ ಪಡೆದುಕೊಂಡಿರುವ ಈ ಘಟನೆಯು ಗ್ರಾಹಕರ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ದೇಶಾದ್ಯಂತ ಈಗ ವ್ಯಾಪಕ ಮೆಚ್ಚುಗೆ ಹಾಗೂ ಗಮನ ಸೆಳೆದಿದೆ.


