ಬೆಂಗಳೂರು:
ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಕರ್ನಾಟಕ ಲೋಕಸೇವಾ ಆಯೋಗ (KPSC) ಪರೀಕ್ಷಾ ಅಕ್ರಮ ಪ್ರಕರಣ ದಿನಕ್ಕೊಂದು ಸ್ಪೋಟಕ ಸತ್ಯಗಳನ್ನು ಹೊರಹಾಕುತ್ತಿದೆ.
ಪರೀಕ್ಷೆ ಆರಂಭವಾಗುವುದಕ್ಕೂ ಮುನ್ನವೇ ಅಭ್ಯರ್ಥಿಗಳಿಂದ ಕೋಟ್ಯಂತರ ರೂ. ಮುಂಗಡ ಹಣವನ್ನು (Advance) ಬಾಚಿಕೊಳ್ಳುವ ಮೂಲಕ ಕಿಂಗ್‌ಪಿನ್ ಬಸವರಾಜ್ ಕನ್ನಾಳೆ ನೇತೃತ್ವದ ಜಾಲ ಭರ್ಜರಿ ದಂಧೆ ನಡೆಸಿದೆ ಎಂಬ ಆಘಾತಕಾರಿ ವಿಚಾರ ಸಿಐಡಿ (CID) ತನಿಖೆಯಿಂದ ಬಯಲಾಗಿದೆ.
ಮೂಲಗಳ ಪ್ರಕಾರ, ಪರೀಕ್ಷೆ ಬರೆಯಲಿರುವ ಆಕಾಂಕ್ಷಿಗಳಿಂದ ಹುದ್ದೆಗಳ ಆಮಿಷ ಒಡ್ಡಿ ಕನ್ನಾಳೆ ಗ್ಯಾಂಗ್ ಮುಂಗಡವಾಗಿ ಬರೋಬ್ಬರಿ 12 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಸೂಲಿ ಮಾಡಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಡೀಲ್ ಮೊತ್ತ 1 ಕೋಟಿಯಿಂದ ಲಕ್ಷಗಳಿಗೆ ಇಳಿಕೆ.!
ಆರಂಭದಲ್ಲಿ ಪ್ರತಿ ಹುದ್ದೆಗೆ ಬರೋಬ್ಬರಿ 1.10 ಕೋಟಿ ರೂ. ವರೆಗೆ ಭಾರಿ ಮೊತ್ತದ ಬೇಡಿಕೆಯನ್ನು ಈ ಜಾಲದ ಆರೋಪಿಗಳು ಮುಂದಿಟ್ಟಿದ್ದರು.
ಆದರೆ ನಿರೀಕ್ಷಿತ ಮಟ್ಟದಲ್ಲಿ ದೊಡ್ಡ ಮೊತ್ತ ನೀಡಲು ಮುಂದೆ ಬರುವ ಆರ್ಥಿಕ ಸ್ಥಿತಿವಂತ ಆಕಾಂಕ್ಷಿಗಳು ಸಿಗದ ಕಾರಣ, ಕ್ರಮೇಣ ಡೀಲ್ ಮೊತ್ತವನ್ನು ಕಡಿತಗೊಳಿಸುತ್ತಾ ಬರಲಾಯಿತು.
ಆರಂಭಿಕ ದೊಡ್ಡ ಆಫರ್ 90 ಲಕ್ಷ, 80 ಲಕ್ಷಕ್ಕೆ ಇಳಿದು, ಕೊನೆಗೆ 40 ಲಕ್ಷ ರೂ. ಗಳಿಗೆ ಹುದ್ದೆಗಳನ್ನು ಮಾರಾಟ ಮಾಡಲು ಬ್ರೋಕರ್‌ಗಳು ಸಿದ್ಧರಾಗಿದ್ದರು. ಪರೀಕ್ಷೆಗೆ ಕೆಲವೇ ದಿನಗಳ ಮುಂಚೆಯೂ ಆಕಾಂಕ್ಷಿಗಳ ಜತೆ ಹಣದ ವ್ಯವಹಾರ ನಡೆಸಿರುವುದು ತನಿಖಾಧಿಕಾರಿಗಳನ್ನು ದಂಗುಬಡಿಸಿದೆ.
ಸಾಮಾನ್ಯ ನೌಕರನಿಂದ ಕೋಟಿಗಳ ಸಾಮ್ರಾಜ್ಯದವರೆಗೆ...
ಒಂದು ಕಾಲದಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದ ಬಸವರಾಜ್ ಕನ್ನಾಳೆ, ಈ ಅಕ್ರಮ ದಂಧೆಯ ಮೂಲಕವೇ ಕಡಿಮೆ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ-ಪಾಸ್ತಿ ಸಂಪಾದಿಸಿ ಮಜಬೂತಾದ ಸಾಮ್ರಾಜ್ಯವನ್ನೇ ಸೃಷ್ಟಿಸಿಕೊಂಡಿದ್ದ.
ಅಕ್ರಮವಾಗಿ ಸಂಗ್ರಹಿಸಿದ ಕೋಟ್ಯಂತರ ಹಣದಿಂದಲೇ ಟ್ರಾವೆಲ್ಸ್ ಸಂಸ್ಥೆ ಆರಂಭಿಸುವುದು, ಐಷಾರಾಮಿ ಫಾರ್ಮ್ ಹೌಸ್, ದುಬಾರಿ ಮನೆಗಳು ಹಾಗೂ ನಗದು ಮತ್ತು ಜಮೀನುಗಳನ್ನು ಖರೀದಿಸಿ ಬಿಂದಾಸ್ ಜೀವನ ನಡೆಸುತ್ತಿFದ್ದು ತನಿಖೆಯಲ್ಲಿ ಸಾಕ್ಷ್ಯ ಸಮೇತ ಹೊರಬಿದ್ದಿದೆ.
ಸಿಐಡಿ ಬಲೆಗೆ ಪ್ರಮುಖರು
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಂಡಿಯಾಗಿ ಕೆಲಸ ಮಾಡಿದ್ದ ಪ್ರಮುಖ ಆರೋಪಿಗಳನ್ನು ಹಾಗೂ ನಂಟI ಹೊಂದಿರುವವರನ್ನು ಸಿಐಡಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಉನ್ನತ ಮಟ್ಟದ ಅಧಿಕಾರಿಗಳ ಕೈವಾಡದ ಕುರಿತೂ ಕುರುಹುಗಳು ಸಿಕ್ಕಿವೆ.
ಯುವಕರ ಭವಿಷ್ಯದ ಜತೆ ಚೆಲ್ಲಾಟವಾಡಿ, ಉದ್ಯೋಗದಾಸೆಗೆ ಕನ್ನ ಹಾಕಿರುವ ಈ ಬ್ರೋಕರ್ ಜಾಲದ ಬೇರುಗಳು ಎಷ್ಟರ ಮಟ್ಟಿಗೆ ಹರಡಿವೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ.


