ಉಡುಪಿ:
ಪ್ರಸಿದ್ಧ ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್‌ಗೆ ಪ್ರವಾಸೋದ್ಯಮ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೀಚ್‌ನಲ್ಲಿ ಪ್ರವಾಸಿಗರಿಗೆ ಲಭ್ಯವಿರುವ ಸೌಲಭ್ಯಗಳು ಮತ್ತು ಮೂಲಭೂತ ಸೌಕರ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಕರಾವಳಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.
ವಿದ್ಯುತ್ ಸರಬರಾಜು ಸಮಸ್ಯೆಗೆ ತಕ್ಷಣವೇ ಬ್ರೇಕ್
ಕರಾವಳಿ ಭಾಗದ ವಾತಾವರಣದಲ್ಲಿರುವ ಉಪ್ಪಿನಾಂಶದಿಂದಾಗಿ ವಿದ್ಯುತ್ ತಂತಿಗಳು ತುಕ್ಕು ಹಿಡಿದು ಆಗಾಗ್ಗೆ ತುಂಡಾಗುತ್ತಿದ್ದು, ಬೀಚ್‌ಗೆ ನಿರಂತರ ವಿದ್ಯುತ್ ಸರಬರಾಜಿಗೆ ತೊಂದರೆಯಾಗುತ್ತಿತ್ತು.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಇಂಧನ ಇಲಾಖೆಯಿಂದ ತಕ್ಷಣವೇ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಬೀಚ್ ರಸ್ತೆಯಲ್ಲಿರುವ ವಿದ್ಯುತ್ ತಂತಿಗಳಿಗೆ ಕೂಡಲೇ ಇನ್ಸುಲೇಟೆಡ್ ಕೇಬಲ್ ಅಳವಡಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವಾರದೊಳಗೆ ಅಂದಾಜು ಪಟ್ಟಿ ಸಿದ್ಧಪಡಿಸುವಂತೆ ತಾಕೀತು ಮಾಡಿದ್ದಾರೆ.
ರಸ್ತೆ ಅಭಿವೃದ್ಧಿ ಹಾಗೂ ಹೂಳೆತ್ತುವಿಕೆ
ರಾಷ್ಟ್ರೀಯ ಹೆದ್ದಾರಿ 66 ರಿಂದ ಪಡುಬಿದ್ರಿ ಬೀಚ್‌ಗೆ ಸಂಪರ್ಕ ಕಲ್ಪಿಸುವ ಸುಮಾರು 3 ಕಿ.ಮೀ. ರಸ್ತೆ ವಿಸ್ತರಣೆ, ಕಾಂಕ್ರೀಟ್ ಕಾಮಗಾರಿ ಹಾಗೂ ಎಂಡ್‌ಪಾಯಿಂಟ್ ರಸ್ತೆಯ ಕಾಮಿನಿ ಹೊಳೆಯ ಹೂಳೆತ್ತುವ ಕಾಮಗಾರಿಗೆ ಸಂಬಂಧಿಸಿದಂತೆ, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಜಂಟಿ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಪ್ರಮುಖ ಪ್ರಮುಖ ನಿರ್ಧಾರಗಳು ಹಾಗೂ ಸ್ಥಳೀಯ ಬೇಡಿಕೆಗಳು:
ಒತ್ತುವರಿ ತೆರವು:
ಬೀಚ್‌ಗೆ ಹೊಂದಿಕೊಂಡಿರುವ ಸರ್ಕಾರಿ ಜಾಗಗಳನ್ನು ಖಾಸಗಿಯವರು ಒತ್ತುವರಿ ಮಾಡಿರುವ ಕುರಿತು ಮೌಖಿಕ ದೂರುಗಳು ಕೇಳಿಬಂದಿದ್ದು, ಕಂದಾಯ ಇಲಾಖಾ ಅಧಿಕಾರಿಗಳು ಕೂಡಲೇ ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ:
ಪ್ರತಿದಿನ 1 ರಿಂದ 2 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ವಾಹನ ನಿಲುಗಡೆಗೆ ಸಮೀಪದ ಸರ್ಕಾರಿ ಅಥವಾ ಖಾಸಗಿ ಜಾಗವನ್ನು ಪಡೆದು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ನಿರ್ದೇಶಿಸಲಾಗಿದೆ.
ಕಡಲ್ಕೊರೆತ ನಿಯಂತ್ರಣ:
ಕಡಲ್ಕೊರೆತ ಸಮಸ್ಯೆಯಿಂದ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಆಗುತ್ತಿರುವ ಅಡಚಣೆಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಸ್ಥಳೀಯ ಮನವಿಗಳು:
ಹೆಜಮಾಡಿ-ಪಡುಬಿದ್ರಿ ಮಧ್ಯದ ಮುಟ್ಟಳಿವೆಗೆ ಬ್ರೇಕ್ ವಾಟರ್ ನಿರ್ಮಾಣ, ನಾದರಸ್ತಿ ಬೀಚ್ ಸಂಪರ್ಕ ಸೇತುವೆಗೆ ಕಾಯಕಲ್ಪ, ಬಾಕಿ ಇರುವ 1 ಕಿ.ಮೀ ಸಮುದ್ರ ತಡೆಗೋಡೆ ಹಾಗೂ ಎಂಡ್‌ಪಾಯಿಂಟ್ ದ್ವೀಪಕ್ಕೆ ತೂಗು ಸೇತುವೆ ನಿರ್ಮಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಸಂಬಂಧಪಟ್ಟ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಮ್.ಎ. ಗಫೂರ್, ಮೆಸ್ಕಾಂ ಚೇರ್ಮನ್ ಹರೀಶ್ ಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ರಾಮ್‌ಪ್ರಸಾತ್ ಮನೋಹರ್, ಎಡಿಸಿ ಅಬೀದ್ ಗಧ್ಯಾಳ, ಮೆಸ್ಕಾಂ ಎಂಡಿ ಹರೀಶ್, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸೌಮ್ಯಾ, ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್.ಎಮ್, ಬ್ಲೂ ಫ್ಲಾಗ್ ಬೀಚ್ ಮ್ಯಾನೇಜರ್ ವಿಜಯ ಶೆಟ್ಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


