ಬಸವನಬಾಗೇವಾಡಿ:
ಸನಾತನ ಧರ್ಮದ ಪ್ರಚಾರ ಮತ್ತು ಗೋಮಾತೆಯ ರಕ್ಷಣೆಯ ಜಾಗೃತಿಗಾಗಿ ಉತ್ತರ ಪ್ರದೇಶದ ಬರೇಲಿಯ ವ್ಯಕ್ತಿಯೊಬ್ಬರು ಕೈಗೊಂಡಿರುವ ವಿಶಿಷ್ಟ ಸಾಹಸಯಾತ್ರೆ ಈಗ ಎಲ್ಲರ ಗಮನ ಸೆಳೆದಿದೆ.
ಬರೇಲಿಯ ನರೇಶ್ ಕಂಕವಾರ ಎಂಬುವವರು ನೆಲದಲ್ಲೇ ಉರುಳುತ್ತಾ ಭಾರತ ಪರ್ಯಟನೆ ನಡೆಸುವ ಮೂಲಕ ಅಚಲ ಸಂಕಲ್ಪ ತೊಟ್ಟಿದ್ದಾರೆ. ಗುರುವಾರ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಮಾರ್ಗವಾಗಿ ಬಾಗಲಕೋಟೆಯ ಬಾದಾಮಿ ಬನಶಂಕರಿ ದೇವಿ ದರ್ಶನಕ್ಕೆ ತೆರಳಿದ ಇವರ ಉರುಳು ಸೇವೆಯ ಶೈಲಿ ಅಚ್ಚರಿ ಮೂಡಿಸಿದೆ.
ಉರುಳು ಸೇವೆಯ ವಿಶಿಷ್ಟ ಶೈಲಿ ಮತ್ತು ಸಿದ್ಧತೆ
ನರೇಶ್ ಅವರ ಈ ಪಯಣದ ಶೈಲಿ ತೀರಾ ವಿಭಿನ್ನವಾಗಿದೆ.
ನೆಲದ ಮೇಲೆ ಅಂಗಾತವಾಗಿ ಒರಗಿ, ನಂತರ ಮೇಲೆದ್ದು ಮುಂದೆ ಸಾಗುತ್ತಾರೆ.
ತಲುಪಿದ ಜಾಗವನ್ನು ಗುರುತಿಸಲು ಕೈಯಲ್ಲಿ ಸಣ್ಣ ಗುಂಡುಕಲ್ಲನ್ನು ಹಿಡಿದು ಗುರುತು ಹಾಕಿಕೊಳ್ಳುತ್ತಾರೆ.
ಬಿಸಿಲು ಮತ್ತು ನೆಲದ ಕಲ್ಲುಗಳಿಂದ ರಕ್ಷಣೆ ಪಡೆಯಲು ಮೊಣಕೈ ಹಾಗೂ ಬೆನ್ನಿಗೆ ವಿಶೇಷ ಸುರಕ್ಷತಾ ಬಟ್ಟೆಗಳನ್ನು ಕಟ್ಟಿಕೊಂಡಿದ್ದಾರೆ.
ಕುಟುಂಬದ ಸಾಥ್ ಮತ್ತು ಹಣದ ಆಸೆಯಿಲ್ಲದ ಪಯಣ
ವೃತ್ತಿಯಲ್ಲಿ ಶಿಕ್ಷಕರಾಗಿರುವ ನರೇಶ್ ಅವರ ಈ ದೀರ್ಘ ಪಯಣದಲ್ಲಿ ಪತ್ನಿ ಸುಮಿತ್ರಾದೇವಿ ಹಾಗೂ ಪುತ್ರ ಪ್ರಹ್ಲಾದ್ ಸಣ್ಣ ತಳ್ಳುಗಾಡಿಯೊಂದಿಗೆ ಹೆಜ್ಜೆಹಾಕುತ್ತಾ ಸಾಥ್ ನೀಡುತ್ತಿದ್ದಾರೆ. ನರೇಶ್ ಅವರು ಈಗಾಗಲೇ 30,000 ಕಿ.ಮೀ.ಗೂ ಅಧಿಕ ದೂರವನ್ನು ಉರುಳು ಸೇವೆಯ ಮೂಲಕವೇ ಕ್ರಮಿಸಿದ್ದಾರೆ. ದಾರಿಯಲ್ಲಿ ಯಾರಾದರೂ ಹಣ ಅಥವಾ ಆಹಾರ ನೀಡಲು ಬಂದರೂ, "ನಮ್ಮಲ್ಲಿ ಎಲ್ಲಾ ವ್ಯವಸ್ಥೆಯಿದೆ" ಎಂದು ವಿನಮ್ರವಾಗಿ ನಿರಾಕರಿಸುತ್ತಾರೆ.
ಗೋಮಾತೆ ರಾಷ್ಟ್ರೀಯ ಪ್ರಾಣಿಯಾಗಲಿ: ನರೇಶ್
ಈ ಕುರಿತು ಮಾತನಾಡಿರುವ ನರೇಶ್, "ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು. ಆಕೆಯ ಮೂತ್ರ ಮತ್ತು ಸಗಣಿಯಲ್ಲಿ ಅದ್ಭುತ ಔಷಧೀಯ ಗುಣಗಳಿವೆ. ಪರಮಾತ್ಮನ ಕೃಪೆಯಿಂದ ಸನಾತನ ಧರ್ಮ ಮತ್ತು ಗೋರಕ್ಷಣೆಯ ಈ ಸಂಕಲ್ಪ ಈಡೇರಬೇಕು" ಎಂದು ಆಶಿಸಿದ್ದಾರೆ. ಒಟ್ಟು 10 ವರ್ಷಗಳ ಕಾಲ ಭಾರತದಾದ್ಯಂತ ಎಲ್ಲಾ ಜ್ಯೋತಿರ್ಲಿಂಗಗಳ ದರ್ಶನ ಪಡೆದು, ನಂತರ ನೇಪಾಳಕ್ಕೂ ತೆರಳುವ ಯೋಜನೆ ಹೊಂದಿರುವುದಾಗಿ ಅವರು ವಿವರಿಸಿದ್ದಾರೆ.


