ಬೆಂಗಳೂರು:
ರಾಜ್ಯದ ತುರ್ತು ಆರೋಗ್ಯ ಸೇವೆಯ ಜೀವನಾಡಿಯಾಗಿರುವ 'ಆರೋಗ್ಯ ಕವಚ' 108 ಆ್ಯಂಬುಲೆನ್ಸ್ ಸೇವೆಗೆ ದೊಡ್ಡ ಮಟ್ಟದ ಆಘಾತ ಎದುರಾಗುವ ಸಾಧ್ಯತೆಯಿದೆ.
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿರುವ ರಾಜ್ಯದ 108 ಆ್ಯಂಬುಲೆನ್ಸ್ ನೌಕರರು, ಸೆಪ್ಟೆಂಬರ್ 20ರಿಂದ ಸಾಮೂಹಿಕವಾಗಿ ರಾಜೀನಾಮೆ ನೀಡಿ ಉಗ್ರ ಹೋರಾಟಕ್ಕಿಳಿಯುವುದಾಗಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ನೌಕರರ ಪ್ರಮುಖ ಬೇಡಿಕೆಗಳು ಏನು.?
ರಾಜ್ಯಾದ್ಯಂತ 3,500ಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 108 ಆ್ಯಂಬುಲೆನ್ಸ್ ಪೈಲಟ್‌ಗಳು (ಚಾಲಕರು) ಹಾಗೂ ತುರ್ತು ವೈದ್ಯಕೀಯ ತಜ್ಞರು (EMT) ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ವಲಯವಾರು ವೇತನ ಪದ್ಧತಿಯನ್ನು ರದ್ದುಪಡಿಸಿ ಏಕರೂಪ ವೇತನ ಜಾರಿಗೊಳಿಸಬೇಕು.
ಕರ್ತವ್ಯ ನಿರ್ವಹಿಸುವ ವೇಳೆ ಅಪಘಾತದಲ್ಲಿ ಮೃತಪಡುವ ಸಿಬ್ಬಂದಿಯ ಕುಟುಂಬಕ್ಕೆ ರೂ.
50 ಲಕ್ಷ ಪರಿಹಾರ ನೀಡಬೇಕು. ಜೇಷ್ಠತೆಯ ಆಧಾರದ ಮೇಲೆ ವೇತನ ನಿಗದಿಪಡಿಸುವುದರ ಜತೆಗೆ, ಕಾರ್ಮಿಕ ಇಲಾಖೆಯ ನಿಯಮದಂತೆ ಪ್ರತಿ ತಿಂಗಳು 7ನೇ ತಾರೀಕಿನೊಳಗೆ ವೇತನ ಪಾವತಿಸಬೇಕು.
ಎಲ್ಲಾ ಆಂಬುಲೆನ್ಸ್ ಕೇಂದ್ರಗಳಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯ ಹಾಗೂ ವಾಹನ ತೊಳೆಯಲು ನೀರಿನ ಮೂಲಸೌಕರ್ಯ ಕಲ್ಪಿಸಬೇಕು.
ಸರ್ಕಾರಕ್ಕೆ 15 ದಿನಗಳ ಡೆಡ್‌ಲೈನ್:
ಕಳೆದ ಹಲವು ವರ್ಷಗಳಿಂದ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದರೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ನೌಕರರ ಸಂಘ ಆರೋಪಿಸಿದೆ.
ಈಗಾಗಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸರ್ಕಾರದ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲವಾಗಿರುವ ಕಾರಣ, ನೀಡಿರುವ 15 ದಿನಗಳ ಗಡುವು ಮುಗಿದ ಬಳಿಕ ಸೆಪ್ಟೆಂಬರ್ 20ರಿಂದ ರಾಜ್ಯಾದ್ಯಂತ ತುರ್ತು ಸೇವೆ ಸ್ಥಗಿತಗೊಳಿಸಿ ಸಾಮೂಹಿಕ ರಾಜೀನಾಮೆ ಹಾದಿ ಹಿಡಿಯುವುದಾಗಿ ನೌಕರರು ಎಚ್ಚರಿಸಿದ್ದಾರೆ.
ಸರ್ಕಾರದ ಕಠಿಣ ಎಚ್ಚರಿಕೆ:
ಮತ್ತೊಂದೆಡೆ, ನೌಕರರ ಮುಷ್ಕರದ ಬೆದರಿಕೆಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವರು, ತುರ್ತು ಸೇವೆಗೆ ಅಡ್ಡಿಪಡಿಸಿದರೆ ಅಥವಾ ರೋಗಿಗಳಿಗೆ ತೊಂದರೆಯುಂಟುಮಾಡಿದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸೇವಾ ಒಪ್ಪಂದ ಪಡೆದಿರುವ ಖಾಸಗಿ ಸಂಸ್ಥೆ ಹಾಗೂ ನೌಕರರು ತಮ್ಮ ಸಮಸ್ಯೆಗಳನ್ನು ಪರಸ್ಪರ ಬಗೆಹರಿಸಿಕೊಳ್ಳಬೇಕು, ಆದರೆ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೆಪ್ಟೆಂಬರ್ 20ರೊಳಗೆ ಸರ್ಕಾರ ಮತ್ತು ನೌಕರರ ಸಂಘದ ನಡುವೆ ಸಂಧಾನ ಏರ್ಪಡದಿದ್ದರೆ ರಾಜ್ಯದ ತುರ್ತು ವೈದ್ಯಕೀಯ ಸೇವೆಗೆ ಭಾರೀ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.


