Public Prime News

CLEAR VISION, TRUE MISSION

8 ತಿಂಗಳಿಂದ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿನಿಯರು ಪತ್ತೆ: ಹೊಸ ಸಿಮ್ ಕಾರ್ಡ್‌ ಸುಳಿವಿನಿಂದ ಸಿಐಡಿ ಬಲೆಗೆ ಬಿದ್ದ ರಹಸ್ಯ..!
crime

8 ತಿಂಗಳಿಂದ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿನಿಯರು ಪತ್ತೆ: ಹೊಸ ಸಿಮ್ ಕಾರ್ಡ್‌ ಸುಳಿವಿನಿಂದ ಸಿಐಡಿ ಬಲೆಗೆ ಬಿದ್ದ ರಹಸ್ಯ..!

Public Prime News

Public Prime News

Reported by Public Prime News

ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎಂಟು ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಪ್ರಕರಣಕ್ಕೆ ಕೊನೆಗೂ ರೋಚಕ ತೆರೆಬಿದ್ದಿದೆ. ತನಿಷ್ಕಾ ಹಾಗೂ ತೇಜಸ್ವಿನಿ ಎಂಬ ವಿದ್ಯಾರ್ಥಿನಿಯರು ಕಾಣೆಯಾದ ಕುರಿತು ತೀವ್ರ ಶೋಧ ನಡೆಸುತ್ತಿದ್ದ ಸಿಐಡಿ (CID) ಅಧಿಕಾರಿಗಳಿಗೆ, ಕೇವಲ ಒಂದು ಹೊಸ ಸಿಮ್ ಕಾರ್ಡ್ ಪಡೆಯಲು ಬಳಸಿದ ಆಧಾರ್ ಸುಳುವೇ ಇಡೀ ಪ್ರಕರಣದ ರಹಸ್ಯವನ್ನು ಬಯಲು ಮಾಡುವಂತೆ ಮಾಡಿದೆ.


ನಾಪತ್ತೆಯಾಗಿದ್ದು ಹೇಗೆ.?

ಕಳೆದ ಜನವರಿ 31ರಂದು ಎಂದಿನಂತೆ ಕಾಲೇಜಿಗೆ ತೆರಳಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ವಾಪಸ್ ಮನೆಗೆ ಮರಳಿರಲಿಲ್ಲ. 


ಈ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹಲವು ತಿಂಗಳು ಕಳೆದರೂ ಪೊಲೀಸರಿಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ಆತಂಕಗೊಂಡ ತನಿಷ್ಕಾ ಕುಟುಂಬಸ್ಥರು ಹೈಕೋರ್ಟ್ ಮೆರೆ ಹೋಗಿದ್ದರು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಪ್ರಕರಣವನ್ನು ಸಿಐಡಿಗೆ (CID) ಹಸ್ತಾಂತರಿಸಲಾಗಿತ್ತು.


ಮಲೆ ಮಹದೇಶ್ವರ ಬೆಟ್ಟದ ಸಂಪರ್ಕ ಹಾಗೂ ಸೆಲ್ಫಿ ಸುಳಿವು.!

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಐಡಿ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸಿದಾಗ, ಇಬ್ಬರೂ ಯುವತಿಯರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿರುವ ಪ್ರಾಥಮಿಕ ಮಾಹಿತಿ ಲಭಿಸಿತ್ತು. ಅಲ್ಲಿ ಮಗುವಿನೊಂದಿಗೆ ಆಟವಾಡುತ್ತಿದ್ದ ಈ ಯುವತಿಯರೊಂದಿಗೆ ಸ್ಥಳೀಯ ಮಹಿಳೆಯೊಬ್ಬರು ಸೆಲ್ಫಿ ತೆಗೆದುಕೊಂಡಿದ್ದ ಫೋಟೋ ಕೂಡ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಆದರೆ ಆ ನಂತರ ಅವರ ಜಾಡು ಸಿಕ್ಕಿರಲಿಲ್ಲ.


ಹೊಸ ಸಿಮ್ ಕಾರ್ಡ್‌ ತಂದಿಟ್ಟ ರೋಚಕ ಟ್ವಿಸ್ಟ್

ತನಿಖೆ ಮುಂದುವರಿದ ಸಂದರ್ಭದಲ್ಲಿ ತನಿಷ್ಕಾ ತನ್ನ ಮೊಬೈಲ್ ಗಾಗಿ ಹೊಸ ಸಿಮ್ ಕಾರ್ಡ್ ಪಡೆಯಲು ಮುಂದಾಗಿದ್ದಾಳೆ. ಈ ವೇಳೆ ಆಕೆ ನೀಡಿದ ಆಧಾರ್ ಸಂಖ್ಯೆ ಮತ್ತು ವಿವರಗಳು ಸಿಮ್ ಸೇವಾ ಸಂಸ್ಥೆಯ ಮೂಲಕ ನೇರವಾಗಿ ಸಿಐಡಿ ಅಧಿಕಾರಿಗಳಿಗೆ ಅಲರ್ಟ್ ನೀಡಿವೆ. ಈ ತಾಂತ್ರಿಕ ಸುಳಿವನ್ನೇ ಬೆನ್ನಟ್ಟಿದ ಅಧಿಕಾರಿಗಳು ನಿಖರವಾದ ಸ್ಥಳವನ್ನು ಪತ್ತೆಹಚ್ಚಿ ಇಬ್ಬರು ವಿದ್ಯಾರ್ಥಿನಿಯರನ್ನು ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದಾರೆ.


ವಿಚಾರಣೆ ವೇಳೆ ಬಯಲಾದ ಅಚ್ಚರಿಯ ಸಂಗತಿಗಳು

ಸಿಐಡಿ ವಿಚಾರಣೆ ವೇಳೆ ದಿಗ್ಭ್ರಮೆ ಮೂಡಿಸುವ ಸತ್ಯಗಳು ಹೊರಬಂದಿವೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ತನಿಷ್ಕಾಗೆ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯವಾಗಿದೆ. ಬಳಿಕ ಆತನೊಂದಿಗೆ ತೆರಳಿದ ತನಿಷ್ಕಾ ಆತನನ್ನು ವಿವಾಹವಾಗಿದ್ದು, ತನ್ನೊಂದಿಗೆ ಇದ್ದ ತೇಜಸ್ವಿನಿಯನ್ನು ತಮ್ಮ ತಂಗಿ ಎಂದೇ ಪರಿಚಯಿಸಿ ಆತನ ಮನೆಯವರೊಂದಿಗೆ ವಾಸಿಸುತ್ತಿದ್ದಳು ಎಂಬುದು ಗೊತ್ತಾಗಿದೆ. ಅಷ್ಟೇ ಅಲ್ಲದೆ, ಪ್ರಸ್ತುತ ತನಿಷ್ಕಾ ಗರ್ಭಿಣಿಯಾಗಿರುವುದು ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ಸದ್ಯ ಸಿಐಡಿ ಅಧಿಕಾರಿಗಳು ಇಬ್ಬರೂ ಯುವತಿಯರನ್ನು ಮಾನ್ಯ ಹೈಕೋರ್ಟ್ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದು, ಈ ಎಂಟು ತಿಂಗಳ ಅವಧಿಯಲ್ಲಿ ನಡೆದಿರುವ ಸಂಪೂರ್ಣ ಘಟನೆಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Share this story