ನವದೆಹಲಿ:
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭೀಕರ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಾಹನಗಳ ನಡುವೆಯೇ ನೇರ ಸಂವಹನ ನಡೆಸುವ ಅತ್ಯಾಧುನಿಕ V2V (Vehicle-to-Vehicle) ತಂತ್ರಜ್ಞಾನವನ್ನು ಹೊಸ ವಾಹನಗಳಿಗೆ ಕಡ್ಡಾಯಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಜ್ಜಾಗಿದೆ.
ಏನಿದು V2V ತಂತ್ರಜ್ಞಾನ? ಹೇಗೆ ಕೆಲಸ ಮಾಡುತ್ತದೆ..?
V2V (ವಾಹನ-ವಾಹನ ಸಂವಹನ) ತಂತ್ರಜ್ಞಾನವು ರಸ್ತೆಯಲ್ಲಿ ಸಂಚರಿಸುವ ವಾಹನಗಳು ಪರಸ್ಪರ ಡಿಜಿಟಲ್ ಮೂಲಕ ಮಾಹಿತಿ ಹಂಚಿಕೊಳ್ಳುವ ವ್ಯವಸ್ಥೆಯಾಗಿದೆ.
ಇದರಡಿ ವಾಹನದ ವೇಗ, ನಿಖರವಾದ ಸ್ಥಳ, ಚಲಿಸುತ್ತಿರುವ ದಿಕ್ಕು ಹಾಗೂ ಬ್ರೇಕಿಂಗ್ ಕುರಿತ ಮಾಹಿತಿಯು ಹತ್ತಿರದಲ್ಲೇ ಇರುವ ಇತರೆ ವಾಹನಗಳಿಗೆ ಕ್ಷಣಮಾತ್ರದಲ್ಲಿ ರವಾನೆಯಾಗುತ್ತದೆ.
ಉದಾಹರಣೆಗೆ: ಮುಂದಿರುವ ವಾಹನವು ಏಕಾಏಕಿ ಬ್ರೇಕ್ ಹಾಕಿದರೆ, ಅದರ ಹಿಂದೆ ವೇಗವಾಗಿ ಬರುತ್ತಿರುವ ವಾಹನಕ್ಕೆ ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಎಚ್ಚರಿಕೆಯ ಸಿಗ್ನಲ್ ಸಿಗುತ್ತದೆ. ಇದರಿಂದ ಚಾಲಕ ಎಚ್ಚೆತ್ತುಕೊಂಡು ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಿ ಸಂಭವಿಸಬಹುದಾದ ದೊಡ್ಡ ಅಪಘಾತವನ್ನು ಸುಲಭವಾಗಿ ತಪ್ಪಿಸಬಹುದು.
2027ರಿಂದ ಹೊಸ ವಾಹನಗಳಲ್ಲಿ ಕಡ್ಡಾಯ..?
ಕೇಂದ್ರ ಸರ್ಕಾರದ ಕರಡು ನಿಯಮದ ಪ್ರಕಾರ, ಬರುವ 2027ರ ಅಕ್ಟೋಬರ್ 1ರಿಂದ ದೇಶದಲ್ಲಿ ತಯಾರಾಗುವ ಹೊಸ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಕಾರುಗಳು, ಬಸ್‌ಗಳು ಹಾಗೂ ಸರಕು ಸಾಗಣೆ ವಾಹನಗಳಲ್ಲಿ V2V ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸುವ ಪ್ರಸ್ತಾವನೆ ಇದೆ. ಈ ವ್ಯವಸ್ಥೆಯು ಅಧಿಕೃತ AIS-230 ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.
ADAS ಗಿಂತ ಇದು ಹೇಗೆ ಭಿನ್ನ.?
ಪ್ರಸ್ತುತ ಆಧುನಿಕ ಕಾರುಗಳಲ್ಲಿ ಬಳಕೆಯಲ್ಲಿರುವ ADAS (Advanced Driver Assistance Systems) ತಂತ್ರಜ್ಞಾನವು ಕ್ಯಾಮೆರಾ ಮತ್ತು ಬಾಹ್ಯ ಸೆನ್ಸರ್‌ಗಳ ಮೇರೆಗೆ ಅಪಾಯವನ್ನು ಪತ್ತೆ ಮಾಡುತ್ತದೆ. ಆದರೆ, V2V ತಂತ್ರಜ್ಞಾನದಲ್ಲಿ ವಾಹನಗಳೇ ನೇರವಾಗಿ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವೆ. ವಿಶೇಷವೆಂದರೆ, ಮುಂದೆ ಬರುವ ವಾಹನ ನೇರವಾಗಿ ಕಣ್ಣಿಗೆ ಕಾಣದಿದ್ದರೂ (ಮೋಡ, ದಟ್ಟ ಮಂಜು ಅಥವಾ ತಿರುವುಗಳಲ್ಲಿ) ಅದರ ಅಪಾಯದ ಮುನ್ಸೂಚನೆ ಈ ತಂತ್ರಜ್ಞಾನದ ಮೂಲಕ ಲಭ್ಯವಾಗಲಿದೆ.
ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಈ ತಂತ್ರಜ್ಞಾನವು ಕ್ರಾಂತಿಕಾರಿಯಾಗಿದ್ದರೂ, ವಾಹನಗಳ ಸ್ಥಳ ಮತ್ತು ಮಾಹಿತಿಯ ನಿರಂತರ ವಿನಿಮಯದಿಂದ ಡೇಟಾ ಗೌಪ್ಯತೆ ಹಾಗೂ ಸೈಬರ್ ಭದ್ರತೆಯ ಸವಾಲುಗಳೂ ಇವೆ. ಹೀಗಾಗಿ ಕೇಂದ್ರ ಸರ್ಕಾರವು ಅತ್ಯಂತ ಸುರಕ್ಷಿತ ಹಾಗೂ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ರೂಪಿಸಲು ಮುಂದಾಗಿದೆ.


